* ಆಸ್ಟ್ರೇಲಿಯಾ ವರ್ಸಸ್‌ ಆಫ್ಘಾನಿಸ್ತಾನ ಏಕೈಕ ಟೆಸ್ಟ್‌ ಪಂದ್ಯದ ಸುತ್ತ ಅನುಮಾನದ ಹುತ್ತ* ಮಹಿಳೆಯರ ಕ್ರೀಡೆಗೆ ನಿಷೇಧ ಹೇರಿದ ತಾಲಿಬಾನ್ ಉಗ್ರರು* ತಾಲಿಬಾನಿಗಳ ನಡೆಗೆ ಸಡ್ಡು ಹೊಡೆದ ಕ್ರಿಕೆಟ್ ಆಸ್ಟ್ರೇಲಿಯಾ

ಸಿಡ್ನಿ(ಸೆ.11): ಇತ್ತೀಚೆಗಷ್ಟೇ ತಾಲಿಬಾನ್‌ ಉಗ್ರರ ವಶಕ್ಕೆ ಸಿಲುಕಿದ ಅಫ್ಘಾನಿಸ್ತಾನದಲ್ಲಿ ಮತಾಂಧ ಕಟ್ಟರ್‌ವಾದಿಗಳ ಒಂದೊಂದೇ ನಿರ್ಬಂಧಗಳು ಜಾರಿಯಾಗತೊಡಗಿದೆ. ಇದೀಗ ಮಹಿಳೆಯರು ಕ್ರಿಕೆಟ್‌ ಸೇರಿದಂತೆ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಅಂಗಾಂಗ ಪ್ರದರ್ಶನವಾಗುತ್ತದೆ ಎಂಬ ನೆಪ ಮುಂದೊಡ್ಡಿ ನಿರ್ಬಂಧ ಹೇರಲಾಗಿದೆ ಎಂದು ಆಸ್ಪ್ರೇಲಿಯಾದ ಎಸ್‌ಬಿಎಸ್‌ ವಾಹಿನಿ ವರದಿ ಮಾಡಿದೆ.

ತಾಲಿಬಾನ್‌ ವಕ್ತಾರ ಅಹ್ಮದುಲ್ಲಾ ವಾಸಿಕ್‌ ಎಂಬಾತನ ಹೇಳಿಕೆ ಆಧರಿಸಿ ಈ ವರದಿ ಮಾಡಲಾಗಿದೆ. ‘ಕ್ರಿಕೆಟ್‌ ಆಡುವಾಗ ಮಹಿಳೆಯರ ಮುಖ ಹಾಗೂ ಶರೀರ ಎಲ್ಲರಿಗೂ ಕಾಣುತ್ತದೆ. ಇದಕ್ಕೆ ಇಸ್ಲಾಂನಲ್ಲಿ ಅನುಮತಿ ಇಲ್ಲ. ಅವರ ಫೋಟೊ, ವಿಡಿಯೋ ಬೇರೆಯವರು ನೋಡುತ್ತಾರೆ. ಇದಕ್ಕೆ ಇಸ್ಲಾಂ ಹಾಗೂ ಇಸ್ಲಾಮಿಕ್‌ ಎಮಿರೇಟ್ಸ್‌ ಅವಕಾಶ ನೀಡುವುದಿಲ್ಲ’ ಎಂದಿದ್ದಾನೆ.

T20 World Cup ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!

ತಾಲಿಬಾನ್‌ನ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕ್ರಿಕೆಟ್‌ ಆಸ್ಪ್ರೇಲಿಯಾ, ‘ಮಹಿಳಾ ಕ್ರಿಕೆಟ್‌ಗೆ ಅನುಮತಿ ನೀಡದಿದ್ದರೆ ಆಫ್ಘಾನಿಸ್ತಾನ ವಿರುದ್ಧ ಸರಣಿ ಆಯೋಜಿಸುವುದಿಲ್ಲ ಎಂದು ಎಚ್ಚರಿಸಿದೆ. ‘ಮಹಿಳಾ ಕ್ರಿಕೆಟ್‌ನ ಬೆಳವಣಿಗೆ ಆಸ್ಪ್ರೇಲಿಯಾ ಕ್ರಿಕೆಟ್‌ಗೆ ಮಹತ್ವದ್ದಾಗಿದೆ. ಅದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಮಹಿಳೆಯರ ಆಟಕ್ಕೆ ತಾಲಿಬಾನ್‌ ಅನುಮತಿಸದಿದ್ದರೆ ಪುರುಷರ ತಂಡದ ಟೆಸ್ಟ್‌ ಪಂದ್ಯವನ್ನು ಕೂಡಾ ಆಯೋಜಿಸುವುದಿಲ್ಲ’ ಎಂದಿದೆ. ಆಸ್ಪ್ರೇಲಿಯಾ- ಅಫ್ಘಾನಿಸ್ತಾನ ಏಕೈಕ ಟೆಸ್ಟ್‌ ಪಂದ್ಯ ನ.27ಕ್ಕೆ ಹೋಬರ್ಟ್‌ನಲ್ಲಿ ನಿಗದಿಯಾಗಿದೆ.