ಗೋಲ್ಡ್‌ ಕೋಸ್ಟ್(ಡಿ.05)‌: ಬಿಗ್‌ಬ್ಯಾಶ್‌ ಲೀಗ್‌ ಟಿ20 ಟೂರ್ನಿಯಲ್ಲಿ ಆಡಲು ಆಸ್ಪ್ರೇಲಿಯಾಗೆ ತೆರಳಿರುವ ಆಫ್ಘಾನಿಸ್ತಾನದ ಸ್ಪಿನ್ನರ್‌ ಮುಜೀಬ್‌ ಉರ್‌ ರಹಮಾನ್‌ಗೆ ಕೊರೋನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಳೆದ ವಾರ ಆಸ್ಪ್ರೇಲಿಯಾಗೆ ಆಗಮಿಸಿದ ಮುಜೀಬ್‌, ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಗೆ ಎಲ್ಲ ರೀತಿ ನೆರವು ನೀಡಲಿದ್ದೇವೆ ಎಂದು ಕ್ವೀನ್ಸ್‌ಲೆಂಡ್‌ ಕ್ರಿಕೆಟ್‌ನ ಮುಖ್ಯಸ್ಥ ಟೆರ್ರಿ ಸ್ವೆನ್ಸನ್‌ ಹೇಳಿದ್ದಾರೆ.

2020-21ನೇ ಸಾಲಿನ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುವ ಮುಜೀಬ್ ಉರ್ ರೆಹಮಾನ್ ಆಫ್ಘಾನಿಸ್ತಾನದ ಕಾಬೂಲ್‌ನಿಂದ ಆಸ್ಟ್ರೇಲಿಯಾಗೆ ಕಳೆದ ವಾರವಷ್ಟೇ ಪ್ರಯಾಣ ಬೆಳೆಸಿದ್ದರು.  19 ವರ್ಷದ ಮುಜೀಬ್ ಉರ್ ರೆಹಮಾನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬ್ರಿಸ್ಬೇನ್ ಹೀಟ್‌ ತಂಡದ ಮೂಲಗಳು ಖಚಿತಪಡಿಸಿವೆ.

ಕೊರೋನಾ ಹಾವಳಿ: ದಕ್ಷಿಣ ಆಫ್ರಿಕಾ-ಇಂಗ್ಲೆಂಡ್‌ ಏಕದಿನ ಸರಣಿ ಮುಂದೂಡಿಕೆ..!

ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಮುಜೀಬ್‌ ಉರ್‌ ರೆಹಮಾನ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಜೀಬ್ ಉರ್ ರೆಹಮಾನ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸದಸ್ಯರಾಗಿದ್ದರು. ಆದರೆ ಮುಜೀಬ್ ಪಂಜಾಬ್ ಪರ ಕೇವಲ ಪಂದ್ಯಗಳನ್ನಷ್ಟೇ ಆಡಿದ್ದರು.