ಕರಾಚಿ(ಜು.24): ಪಾಕಿಸ್ತಾನದ ಎಡಗೈ ವೇಗಿ ಮೊಹಮದ್‌ ಆಮೀರ್‌ ಕೊರೋನಾ ವರದಿ ನೆಗೆಟಿವ್‌ ಬಂದಿದೆ. ಹೀಗಾಗಿ ಆಮೀರ್‌, ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲು ಪಾಕ್‌ ತಂಡ ಕೂಡಿಕೊಳ್ಳಲಿದ್ದಾರೆ. 

ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ನಡುವೆ ಆಗಸ್ಟ್ 5 ರಿಂದ ಟೆಸ್ಟ್‌ ಸರಣಿ ಶುರುವಾಗಲಿದೆ. 2ನೇ ಟೆಸ್ಟ್‌ ನಡೆಯುವ ವೇಳೆಗೆ ಅಮೀರ್‌, ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಪಾಕ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಮೀರ್‌ ಕಳೆದ ವರ್ಷ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಸೀಮಿತ ಓವರ್‌ಗಳ ಸರಣಿಯಲ್ಲಿ ಮಾತ್ರ ಪಾಕ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆಗಸ್ಟ್ 28 ರಿಂದ  3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ಈ ಮೊದಲು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಮೊಹಮ್ಮದ್ ಆಮೀರ್ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಹೀಗಾಗಿ ಬೇರೆ ಆಟಗಾರನನ್ನು ಪಿಸಿಬಿ ಆಯ್ಕೆ ಮಾಡಿತ್ತು. ಆದರೆ ಆಮೀರ್ ಪತ್ನಿ ಕಳೆದ ವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಟಿ20 ಸರಣಿಯಾಡಲು ತಾವು ಲಭ್ಯವಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಹ್ಯಾರಿಸ್ ರವೂಫ್ ಅವರನ್ನು ಹೊರಗಿಟ್ಟು ಆಮೀರ್‌ಗೆ ಅವಕಾಶ ಕಲ್ಪಿಸಲಾಗಿದೆ. ಹ್ಯಾರಿಸ್ ರವೂಫ್ ರವೂಫ್ ಕಳೆದ ತಿಂಗಳು 6 ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಈ ಪೈಕಿ ಐದು ಟೆಸ್ಟ್‌ಗಳಲ್ಲಿ ಪಾಸಿಟಿವ್ ಬಂದಿತ್ತು.

ನಿರ್ಣಾಯಕ ಟೆಸ್ಟ್‌ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ

ಮೊಹಮ್ಮದ್ ಆಮೀರ್ ಜತೆಗೆ ಮೊಹಮ್ಮದ್ ಇಮ್ರಾನ್ ಕೂಡಾ ಇಂಗ್ಲೆಂಡ್‌ಗೆ ವಿಮಾನ ಹತ್ತಲಿದ್ದಾರೆ. ಕಳೆದ ತಿಂಗಳು ನಡೆಸಿದ್ದ ಕೊರೋನಾ ಟೆಸ್ಟ್‌ನಲ್ಲಿ ಇಮ್ರಾನ್‌ಗೆ ಸೋಂಕು ತಗುಲಿದ್ದುದು ದೃಢಪಟ್ಟಿತ್ತು. ಆದರೆ ಇದೀಗ ನಡೆಸಿದ ಹೊಸ ಟೆಸ್ಟ್‌ನಲ್ಲಿ ವರದಿ ನೆಗೆಟಿವ್ ಬಂದಿದೆ.