ಐಪಿಎಲ್‌ನಲ್ಲಿ ಹೈದರಾಬಾದ್ ತಂಡವು ಪಂಜಾಬ್ ನೀಡಿದ 246 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ 40 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಟ್ರ್ಯಾವಿಸ್ ಹೆಡ್ ಕೂಡ 66 ರನ್ ಗಳಿಸಿ ತಂಡಕ್ಕೆ ನೆರವಾದರು. ಪಂಜಾಬ್ ಪರ ಶ್ರೇಯಸ್ ಅಯ್ಯರ್ 82 ರನ್ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ರನ್ ಚೇಸ್ ಆಗಿದೆ.

ಹೈದರಾಬಾದ್‌: ಐಪಿಎಲ್‌ನಲ್ಲಿ ಮತ್ತೆ ರನ್‌ ಹೊಳೆ ಹರಿದಿದೆ. ಪಂಜಾಬ್ ಕಿಂಗ್ಸ್‌ ನೀಡಿದ್ದ 246 ರನ್‌ಗಳ ಬೃಹತ್‌ ಮೊತ್ತವನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಯಶಸ್ವಿಯಾಗಿ ಚೇಸ್‌ ಮಾಡಿ ಜಯಭೇರಿ ಮೊಳಗಿಸಿದೆ. ಇದು ಐಪಿಎಲ್‌ನಲ್ಲಿ 2ನೇ ಗರಿಷ್ಠ ರನ್‌ ಚೇಸ್‌. ಕಳೆದ ವರ್ಷ ಕೋಲ್ಕತಾ ವಿರುದ್ಧ ಪಂಜಾಬ್‌ 262 ರನ್‌ ಚೇಸ್‌ ಮಾಡಿ ಗೆದ್ದಿತ್ತು.

ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 245 ರನ್‌ ಸೇರಿಸಿತು. ನಾಯಕ ಶ್ರೇಯಸ್‌ ಅಯ್ಯರ್‌ 38 ಎಸೆತಕ್ಕೆ 82, ಪ್ರಭ್‌ಸಿಮ್ರನ್‌ 42, ಪ್ರಿಯಾನ್ಶ್‌ ಆರ್ಯ 13 ಎಸೆತಕ್ಕೆ 36 ರನ್‌ ಸಿಡಿಸಿದರು. ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ ಸತತ 4 ಸಿಕ್ಸರ್‌ ಸೇರಿದಂತೆ 11 ಎಸೆತಗಳಲ್ಲಿ 34 ರನ್‌ ಬಾರಿಸಿದರು. ಹರ್ಷಲ್‌ ಪಟೇಲ್‌ 4 ವಿಕೆಟ್‌ ಕಿತ್ತರು.

ಬೆಟ್ಟದೆತ್ತರದ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ 18.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಮೊದಲ ವಿಕೆಟ್‌ಗೆ ಟ್ರ್ಯಾವಿಸ್‌ ಹೆಡ್‌-ಅಭಿಷೇಕ್‌ ಶರ್ಮಾ 12.2 ಓವರ್‌ಗಳಲ್ಲಿ 171 ರನ್‌ ಜೊತೆಯಾಟವಾಡಿದರು. ಹೆಡ್‌ 37 ಎಸೆತಕ್ಕೆ 66 ರನ್‌ ಸಿಡಿಸಿ ಔಟಾದರೂ, ಅಭಿಷೇಕ್‌ ಆರ್ಭಟ ಮುಂದುವರಿಯಿತು. 40 ಎಸೆತಕ್ಕೆ ಶತಕ ಪೂರ್ಣಗೊಳಿಸಿದ ಅಭಿಷೇಕ್‌, 55 ಎಸೆತಗಳಲ್ಲಿ 141 ರನ್‌ ಗಳಿಸಿ 17ನೇ ಓವರಲ್ಲಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ, 10 ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ಕ್ಲಾಸೆನ್‌, ಇಶಾನ್‌ ತಂಡವನ್ನು ಗೆಲ್ಲಿಸಿದರು.

ಇದನ್ನೂ ಓದಿ: ಐಪಿಎಲ್ 2025 ರಲ್ಲಿ ಧೂಳೆಬ್ಬಿಸಿದ ಭಾರತದ ಟಾಪ್ 5 ಯುವ ಕ್ರಿಕೆಟಿಗರಿವರು!

ಸ್ಕೋರ್‌:

ಪಂಜಾಬ್‌ 245/6 (ಶ್ರೇಯಸ್‌ 82, ಪ್ರಭ್‌ಸಿಮ್ರನ್‌ 42, ಪ್ರಿಯಾನ್ಶ್‌ 36, ಹರ್ಷಲ್‌ 4-42), 
ಸನ್‌ರೈಸರ್ಸ್‌ 18.3 ಓವರಲ್ಲಿ 247/2 (ಅಭಿಷೇಕ್‌ 141, ಹೆಡ್‌ 66, ಅರ್ಶ್‌ದೀಪ್‌ 1-37)

141: ಐಪಿಎಲ್‌ನ 3ನೇ ಗರಿಷ್ಠ ರನ್‌: ಅಭಿಷೇಕ್‌ 141 ರನ್‌ ಬಾರಿಸಿದರು. ಇದು ಐಪಿಎಲ್‌ನ 3ನೇ ಗರಿಷ್ಠ ವೈಯಕ್ತಿಕ ಮೊತ್ತ. ಕ್ರಿಸ್‌ ಗೇಲ್‌ 175, ಬ್ರೆಂಡನ್‌ ಮೆಕಲಂ 158 ರನ್‌ ಸಿಡಿಸಿದ್ದಾರೆ.

07ನೇ ಶತಕ: ಅಭಿಷೇಕ್‌ ಟಿ20 ಕ್ರಿಕೆಟ್‌ನಲ್ಲಿ 7ನೇ ಶತಕ ಬಾರಿಸಿದರು. ಕೊಹ್ಲಿ 9, ರೋಹಿತ್‌ 8 ಶತಕ ಸಿಡಿಸಿದ್ದಾರೆ.

40 ಎಸೆತಕ್ಕೆ ಅಭಿಷೇಕ್‌ ಶರ್ಮಾ ಸೆಂಚುರಿ!

ಹೈದರಾಬಾದ್‌: ಭಾರತದ ಯುವ ಸೂಪರ್‌ಸ್ಟಾರ್‌ ಅಭಿಷೇಕ್‌ ಶರ್ಮಾ ಮತ್ತೆ ಅಬ್ಬರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 7ನೇ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 15ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಕಳಪೆ ಆಟವಾಡಿದ್ದ ಅಭಿಷೇಕ್‌, ಶನಿವಾರ ಪಂಜಾಬ್‌ ಕಿಂಗ್ಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. 246 ರನ್‌ಗಳ ಗುರಿ ಬೆನ್ನತ್ತಿದ್ದ ತಂಡಕ್ಕೆ ತನ್ನ ಶತಕದ ಮೂಲಕ ಆಸರೆಯಾದರು. ಟ್ರ್ಯಾವಿಸ್‌ ಹೆಡ್‌ ಜೊತೆ 171 ರನ್‌ ಜೊತೆಯಾಟವಾಡಿದ ಅಭಿಷೇಕ್‌, ಕೇವಲ 40 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದರು.

ಇದನ್ನೂ ಓದಿ: ಕೆಎಲ್‌ ರಾಹುಲ್‌ ಸೆಲೆಬ್ರೆಷನ್‌ಗೆ ದಂಗಾದ ಆರ್‌ಸಿಬಿ ಪ್ಲೇಯರ್‌! ಮ್ಯಾಚ್‌ ಬಳಿಕ ಏನದು ಎಂದು ಪ್ರಶ್ನೆ?

ಅತಿ ವೇಗದ ಶತಕದ ಪಟ್ಟಿಯಲ್ಲಿ ಅಭಿಷೇಕ್‌ 6ನೇ ಸ್ಥಾನದಲ್ಲಿದ್ದಾರೆ. 2013ರಲ್ಲಿ ಆರ್‌ಸಿಬಿಯ ಕ್ರಿಸ್‌ ಗೇಲ್‌ ಪುಣೆ ವಿರುದ್ಧ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಲ್ಲದೆ, ಸನ್‌ರೈಸರ್ಸ್‌ ಪರ ಇದು 2ನೇ ವೇಗದ ಶತಕ. ಕಳೆದ ವರ್ಷ ಟ್ರ್ಯಾವಿಸ್‌ ಹೆಡ್‌ ಆರ್‌ಸಿಬಿ ವಿರುದ್ಧ 39 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ್ದರು.

75 ರನ್‌ ಬಿಟ್ಟುಕೊಟ್ಟ ಶಮಿ: 2ನೇ ದುಬಾರಿ

ಶನಿವಾರದ ಪಂದ್ಯದಲ್ಲಿ ಸನ್‌ರೈಸರ್ಸ್‌ನ ಮೊಹಮ್ಮದ್‌ ಶಮಿ 4 ಓವರ್‌ಗಳಲ್ಲಿ 75 ರನ್‌ ಬಿಟ್ಟುಕೊಟ್ಟರು. ಇದು ಐಪಿಎಲ್‌ನಲ್ಲಿ 2ನೇ ಅತಿ ದುಬಾರಿ ಸ್ಪೆಲ್‌. ಇತ್ತೀಚೆಗಷ್ಟೇ ರಾಜಸ್ಥಾನ ರಾಯಲ್ಸ್‌ ತಂಡ ಜೋಫ್ರಾ ಆರ್ಚರ್‌ 4 ಓವರ್‌ಗಳಲ್ಲಿ 76 ರನ್‌ ನೀಡಿದ್ದರು.