ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 135 ರನ್ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ, ತಮ್ಮ ಹೊಸ ಸಂಭ್ರಮಾಚರಣೆಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಕೋಚ್ ಜೇಮ್ಸ್ ಫ್ರಾಂಕ್ಲಿನ್ ನೀಡಿದ 20 ಓವರ್‌ಗಳ ಬ್ಯಾಟಿಂಗ್ ಚಾಲೆಂಜ್ ಪೂರ್ಣಗೊಳಿಸಿದ ಖುಷಿಯಲ್ಲಿ ಈ ವಿಶೇಷ ಆಚರಣೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
ಹೈದರಾಬಾದ್: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 135 ರನ್ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್ ಓಪನರ್ ಅಭಿಷೇಕ್ ಶರ್ಮಾ, ತಮ್ಮ ಹೊಸ ಸೆಲೆಬ್ರೇಷನ್ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಉಪ್ಪಳ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಕೈಗಳನ್ನು ಕಟ್ಟಿಕೊಂಡು ಹೈದರಾಬಾದ್ ಡಗೌಟ್ ಕಡೆ ನೋಡಿ ನಕ್ಕರು. ಈ ಸಂಭ್ರಮಾಚರಣೆಯನ್ನು ತಮ್ಮ ಕೋಚ್‌ಗೆ ಅರ್ಪಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಸನ್‌ರೈಸರ್ಸ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ನೀಡಿದ ವಿಶೇಷ ಚಾಲೆಂಜ್ ಈ ಇನ್ನಿಂಗ್ಸ್‌ಗೆ ಕಾರಣವಾಯ್ತು ಅಂತಾನೂ ಅಭಿಷೇಕ್ ಹೇಳಿದ್ದಾರೆ.
ಗುಟ್ಟು ಬಿಚ್ಚಿಟ್ಟ ಅಭಿಷೇಕ್ ಶರ್ಮಾ
"ಇದು ಫ್ರಾಂಕಿ (ಜೇಮ್ಸ್ ಫ್ರಾಂಕ್ಲಿನ್) ಜೊತೆಗಿನ ಒಂದು ಪ್ಲ್ಯಾನ್ ಆಗಿತ್ತು. ನಾನು 20 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ನಿಂತು ಬ್ಯಾಟ್ ಮಾಡಬೇಕೆಂದು ಅವರು ಬಯಸಿದ್ದರು. ನನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಪೂರ್ತಿ 20 ಓವರ್ ಬ್ಯಾಟಿಂಗ್ ಮಾಡಿದ್ದೇನೆ. ಆ ಗುರಿ ತಲುಪಿದ ಖುಷಿಯಲ್ಲಿ ಈ ಹೊಸ ಸೆಲೆಬ್ರೇಷನ್ ಮಾಡಿದೆ," ಎಂದು ಅಭಿಷೇಕ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಮೊದಲ ಎಸೆತದಿಂದಲೇ ಅಬ್ಬರಿಸುವ ಅಭಿಷೇಕ್, ಡೆಲ್ಲಿ ವಿರುದ್ಧ ನಿಧಾನವಾಗಿ ಆಟ ಶುರು ಮಾಡಿದರು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ನಂತರ ಗೇರ್ ಬದಲಾಯಿಸಿದ ಅವರು, ಮುಂದಿನ 22 ಎಸೆತಗಳಲ್ಲಿ ಶತಕ ತಲುಪಿದರು. ಒಟ್ಟು 68 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 135 ರನ್ ಗಳಿಸಿದರು. ಉಪ್ಪಳದಲ್ಲಿ ಅಭಿಷೇಕ್ ಗಳಿಸಿದ ಎರಡನೇ ಶತಕ ಇದಾಗಿದೆ (ಕಳೆದ ಸೀಸನ್‌ನಲ್ಲಿ ಪಂಜಾಬ್ ವಿರುದ್ಧ 141 ರನ್ ಗಳಿಸಿದ್ದರು).
"ಡೆತ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಿ ಅಭ್ಯಾಸವಿಲ್ಲದಿದ್ದರೂ, ಹೆನ್ರಿಕ್ ಕ್ಲಾಸೆನ್ ಅವರ ಉಪಸ್ಥಿತಿ ನನಗೆ ಆತ್ಮವಿಶ್ವಾಸ ನೀಡಿತು," ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿಯನ್ನು 48 ರನ್‌ಗಳಿಂದ ಸೋಲಿಸಿದ ಹೈದರಾಬಾದ್, ಈ ಸೀಸನ್‌ನಲ್ಲಿ ತಮ್ಮ ಮೂರನೇ ಗೆಲುವನ್ನು ದಾಖಲಿಸಿತು.
ಹೇಗಿತ್ತು ಸನ್‌ರೈಸರ್ಸ್ ಹೈದರಾಬಾದ್-ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಚ್?
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಭಿಷೇಕ್ ಶರ್ಮಾ ಬಾರಿಸಿದ ಅಜೇಯ ಶತಕ(135) ಹಾಗೂ ಟ್ರ್ಯಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೇನ್ ತಲಾ 37 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್ ಕಲೆಹಾಕಿತು.
ಇನ್ನು ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಬಿಕ ಆಘಾತದ ಹೊರತಾಗಿಯೂ ನಿತೀಶ್ ರಾಣಾ(57), ಕೆ ಎಲ್ ರಾಹುಲ್(37) ಹಾಗೂ ಸಮೀರ್ ರಿಜ್ವಿ(41) ಚುರುಕಿನ ಬ್ಯಾಟಿಂಗ್ ನಡೆಸಿದರಾದರೂ ಇಶಾನ್ ಮಾಲಿಂಗ ಮಾರಕ ದಾಳಿಗೆ ತತ್ತರಿಸಿ ಡೆಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಡೆಲ್ಲಿ ತಂಡವು 47 ರನ್‌ಗಳ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಇಶಾನ್ ಕಿಶನ್ ನೇತೃತ್ವದ ಆರೆಂಜ್ ಆರ್ಮಿ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.


