ಆಸ್ಟ್ರೇಲಿಯಾ ಏಕದಿನ ನಾಯಕರಾಗಿ ಪ್ಯಾಟ್ ಕಮಿನ್ಸ್ ನೇಮಕಆ್ಯರೋನ್ ಫಿಂಚ್‌ನಿಂದ ತೆರವಾಗಿದ್ದ ಸ್ಥಾನಕ್ಕೆ ಕಮಿನ್ಸ್ ಆಯ್ಕೆಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್‌ಗೆ ನಿರಾಸೆ
ಮೆಲ್ಬೊರ್ನ್(ಅ.19): ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಇದೀಗ ಆ್ಯರೋನ್ ಫಿಂಚ್ ಅವರಿಂದ ತೆರವಾಗಿದ್ದ ಏಕದಿನ ತಂಡದ ನಾಯಕರಾಗಿಯೂ ನೇಮಕವಾಗಿದ್ದಾರೆ. ಇದನ್ನು ಕ್ರಿಕೆಟ್ ಆಸ್ಪ್ರೇಲಿಯಾ(ಸಿಎ) ಮಂಗಳವಾರ ಖಚಿತಪಡಿಸಿದೆ. ಇತ್ತೀಚೆಗಷ್ಟೇ ತವರಿನಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಫಿಂಚ್ ಸ್ಥಾನವನ್ನು ಪ್ಯಾಟ್ ಕಮಿನ್ಸ್ ತುಂಬಲಿದ್ದಾರೆ. ಇದಷ್ಟೇ ಅಲ್ಲದೇ ನಿಗದಿತ ಓವರ್ ಮಾದರಿಯಲ್ಲಿ ತಂಡದ ನಾಯಕತ್ವ ವಹಿಸಲಿರುವ ಮೊದಲ ವೇಗಿ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. ಅವರು ಈಗಾಗಲೇ ಟೆಸ್ಟ್ ಮಾದರಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾದ ನೂತನ ಏಕದಿನ ನಾಯಕರಾಗಿ ನೇಮಕವಾಗಬಹುದು ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಟೆಸ್ಟ್ ನಂ.1 ವೇಗಿ ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾದ ನೂತನ ಏಕದಿನ ನಾಯಕರಾಗಿ ನೇಮಕವಾಗಿದ್ದಾರೆ.
ಇದೀಗ ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾದ 27ನೇ ಏಕದಿನ ನಾಯಕರಾಗಿ ನೇಮಕವಾಗಿದ್ದಾರೆ. ಬಲಗೈ ವೇಗಿ ಪ್ಯಾಟ್ ಕಮಿನ್ಸ್, 2023ರಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ 29 ವರ್ಷದ ಪ್ಯಾಟ್ ಕಮಿನ್ಸ್, ಮಾಜಿ ನಾಯಕ ಆ್ಯರೋನ್ ಫಿಂಚ್ ನಾಯಕತ್ವದ ಗುಣಗಾನ ಮಾಡಿದ್ದಾರೆ. ''ನಾನು ಆ್ಯರೋನ್ ಫಿಂಚ್ ನಾಯಕತ್ವದಡಿ ಕ್ರಿಕೆಟ್ ತುಂಬಾ ಎಂಜಾಯ್ ಮಾಡಿದ್ದೇನೆ. ಅವರ ನಾಯಕತ್ವದ ಸಾಕಷ್ಟು ಒಳ್ಳೆಯ ಗುಣಗಳನ್ನು ಅವರಿಂದ ಕಲಿತಿದ್ದೇನೆ" ಎಂದು ಕಮಿನ್ಸ್ ಹೇಳಿದ್ದಾರೆ.
ಆಸ್ಟ್ರೇಲಿಯಾ ನಾಯಕನಾಗುವ ಅವಕಾಶ ಸಿಕ್ಕಿದರೆ ಅದು ನನ್ನ ಸೌಭಾಗ್ಯ: ಡೇವಿಡ್ ವಾರ್ನರ್
ಕಮಿನ್ಸ್ ಅವರು ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಶ್ ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಏಕದಿನ ನಾಯಕರಾಗಿ ನೇಮಕವಾಗಿದ್ದಾರೆ. ಪ್ಯಾಟ್ ಕಮಿನ್ಸ್, ಏಕದಿನ ತಂಡದ ನೂತನ ನಾಯಕರಾಗಿ ನೇಮಕ ಮಾಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ, "ಟೆಸ್ಟ್ ನಾಯಕತ್ವ ವಹಿಸಿಕೊಂಡ ಬಳಿಕ ಪ್ಯಾಟ್ ಕಮಿನ್ಸ್ ಅದ್ಭುತವಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಇದೀಗ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಕೆಲವೇ ದಿನಗಳ ಬಳಿಕ ಅಂದರೆ ನವೆಂಬರ್ 17ರಂದು ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಈ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಇದಾದ ಬಳಿಕ ಜನವರಿ ತಿಂಗಳಿನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
