ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ನಾಯಕ ಆ್ಯರೋನ್ ಫಿಂಚ್ಮುಂದಿನ ನಾಯಕನ ಬಗ್ಗೆ ಬ್ಯಾಟ್ ಬೀಸಿದ ಸ್ಪೋಟಕ ಆರಂಭಿಕ ಬ್ಯಾಟರ್ಡೇವಿಡ್ ವಾರ್ನರ್‌ಗೆ ಒಳ್ಳೆಯ ನಾಯಕತ್ವದ ಗುಣಗಳಿವೆ ಎಂದ ಫಿಂಚ್

ಮೆಲ್ಬೊರ್ನ್‌(ಸೆ.12): ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಟಿ20 ತಂಡದ ನಾಯಕ ಆ್ಯರೋನ್ ಫಿಂಚ್, ಆಸೀಸ್ ಏಕದಿನ ತಂಡಕ್ಕೆ ಸಹ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌ ಅವರಿಗೆ ನಾಯಕ ಪಟ್ಟ ಕಟ್ಟುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಡೇವಿಡ್ ವಾರ್ನರ್‌ ಹಾಗೂ ಆ್ಯರೋನ್ ಫಿಂಚ್ ಫಿಂಚ್ ಜೋಡಿಯು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದು ಎನಿಸಿದೆ. ಸೌರವ್ ಗಂಗೂಲಿ-ಸಚಿನ್ ತೆಂಡುಲ್ಕರ್, ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್, ಮ್ಯಾಥ್ಯೂ ಹೇಡನ್-ಆಡಂ ಗಿಲ್‌ಕ್ರಿಸ್ಟ್‌, ರೋಹಿತ್ ಶರ್ಮಾ-ಶಿಖರ್ ಧವನ್ ಅವರಂತೆ ಫಿಂಚ್-ವಾರ್ನರ್ ಜೋಡಿ ಕೂಡಾ ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 

ಆ್ಯರೋನ್ ಫಿಂಚ್, ಆಸ್ಟ್ರೇಲಿಯಾ ಪರ ಒಟ್ಟು 145 ಏಕದಿನ ಪಂದ್ಯಗಳನ್ನಾಡಿದ್ದು, ಈ ಪೈಕಿ ಮೂರನೇ ಒಂದು ಭಾಗದಷ್ಟು, ಅಂದರೆ 54 ಪಂದ್ಯಗಳಲ್ಲಿ ನಾಯಕನಾಗಿ ಕಾಂಗರೂ ಪಡೆಯನ್ನು ಮುನ್ನಡೆಸಿದ್ದಾರೆ. ಆ್ಯರೋನ್ ಫಿಂಚ್, ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ಮಾದರಿಗೆ ಗುಡ್‌ ಬೈ ಹೇಳಿದ್ದರೂ ಸಹಾ, ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಮುಂದುವರೆಯಲಿದ್ದಾರೆ. ಮುಂಬರುವ ಅಕ್ಟೋಬರ್ 16ರಿಂದ ತವರಿನಲ್ಲೇ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಆ್ಯರೋನ್ ಫಿಂಚ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ 35 ವರ್ಷದ ಆ್ಯರೋನ್ ಫಿಂಚ್, ನ್ಯೂಜಿಲೆಂಡ್ ವಿರುದ್ದದ ಮೂರನೇ ಏಕದಿನ ಪಂದ್ಯದ ಬಳಿಕ ಏಕದಿನ ಕ್ರಿಕೆಟ್‌ ಮಾದರಿಗೆ ವಿದಾಯ ಹೇಳಿದ್ದರು.

ಆ್ಯರೋನ್ ಫಿಂಚ್ ಅವರಿಂದ ತೆರವಾದ ನಾಯಕ ಸ್ಥಾನಕ್ಕೆ ಡೇವಿಡ್ ವಾರ್ನರ್‌, ಸ್ಟೀವ್ ಸ್ಮಿತ್ ಹಾಗೂ ಪ್ಯಾಟ್ ಕಮಿನ್ಸ್‌ ಸಂಭಾವ್ಯ ಅಭ್ಯರ್ಥಿಗಳೆನಿಸಿದ್ದಾರೆ. ಆದರೆ ನಾಯಕತ್ವದಲ್ಲಿ ಬ್ಯಾನ್ ಆಗಿದ್ದು ಹಾಗೂ ವರ್ಕ್‌ಲೋಡ್‌ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯುವ ಯಾವ ಆಟಗಾರನಿಗೆ ನಾಯಕ ಪಟ್ಟ ಕಟ್ಟಲಿದೆ ಎನ್ನುವ ಕುತೂಹಲ ಜೋರಾಗಿದೆ. 

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಕೇಪ್‌ಟೌನ್ ಟೆಸ್ಟ್‌ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕರಾಗಿದ್ದ ಡೇವಿಡ್ ವಾರ್ನರ್‌ ಒಂದು ವರ್ಷ ಹಾಗೂ ಬಾಲ್ ಟ್ಯಾಂಪರಿಂಗ್ ಮಾಡಿದ ಕ್ಯಾಮರೋನ್ ಬೆನ್‌ಕ್ರಾಫ್ಟ್‌ಗೆ 9 ತಿಂಗಳ ಕಾಲ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು

ಇದೀಗ ಮುಂದಿನ ನಾಯಕನ ಕುರಿತಂತೆ ಮಾತನಾಡಿದ ಆ್ಯರೋನ್ ಫಿಂಚ್, ಕ್ರಿಕೆಟ್‌ ಆಸ್ಟ್ರೇಲಿಯಾ ಹೊಸ ನಾಯಕನ ಕುರಿತಂತೆ ಪುನರಾವಲೋಕನ ಮಾಡಲಿದೆ ಎಂದೆನಿಸುತ್ತಿದೆ. ಅವರು ನಾಯಕರಾಗಿದ್ದಾಗ ನಾನು ಅವರಡಿಯಲ್ಲಿ ಕೆಲ ಪಂದ್ಯಗಳನ್ನಾಡುವ ಅವಕಾಶ ಸಿಕ್ಕಿತು. ಅವರೊಬ್ಬ ಅದ್ಭುತ ವ್ಯಕ್ತಿ. ಅವರೊಬ್ಬ ಅತ್ಯದ್ಭುತ ತಂತ್ರಗಾರಿಕೆ ಹೊಂದಿರುವ ನಾಯಕನಾಗಿದ್ದು, ಅವರ ನಾಯಕತ್ವದಲ್ಲಿ ಆಡಲು ಎಲ್ಲರು ಇಷ್ಟಪಡುತ್ತಾರೆ ಎಂದು ಡೇವಿಡ್ ವಾರ್ನರ್ ಕುರಿತಂತೆ ಆ್ಯರೋನ್ ಫಿಂಚ್ ಹೇಳಿದ್ದಾರೆ.

ನ್ಯೂಜಿಲೆಂಡ್ ಎದುರಿನ 3ನೇ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ತೊರೆದ ಡೇವಿಡ್ ವಾರ್ನರ್..!

ಕ್ರಿಕೆಟ್ ಆಸ್ಟ್ರೇಲಿಯಾ ಈ ಕುರಿತಂತೆ ಏನೆಲ್ಲಾ ಯೋಚನೆ ಮಾಡುತ್ತಿದೆ ಎಂದು ನನಗಂತೂ 100% ಗೊತ್ತಿಲ್ಲ. ಆದರೆ ಡೇವಿಡ್ ವಾರ್ನರ್, ಕ್ರಿಕೆಟ್‌ ಆಸ್ಟ್ರೇಲಿಯಾದ ನಂಬಿಕೆ ಉಳಿಸಿಕೊಳ್ಳುವ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ಆ್ಯರೋನ್ ಫಿಂಚ್ ಹೇಳಿದ್ದಾರೆ.

ಡೇವಿಡ್ ವಾರ್ನರ್‌, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಬೀಗಿತ್ತು.