* ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ* ಮೂರನೇ ಪಂದ್ಯದಿಂದ ಹೊರಬಿದ್ದ ಡೇವಿಡ್ ವಾರ್ನರ್, ಮಾರ್ಕಸ್‌ ಸ್ಟೋನಿಸ್* 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಆಸ್ಟ್ರೇಲಿಯಾಗೆ 2-0 ಅಂತರದಲ್ಲಿ ಸರಣಿ ಜಯ

ಮೆಲ್ಬೊರ್ನ್‌(ಸೆ.10): ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಹಾಗೂ ತಾರಾ ಆಲ್ರೌಂಡರ್ ಮಾರ್ಕಸ್‌ ಸ್ಟೋನಿಸ್‌ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯವು ಆ್ಯರೋನ್ ಫಿಂಚ್ ಪಾಲಿಗೆ ವಿದಾಯದ ಪಂದ್ಯವಾಗಿದ್ದು, ಈ ಪಂದ್ಯದಿಂದ ಈ ಇಬ್ಬರು ತಾರಾ ಆಸೀಸ್‌ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಸೆಪ್ಟೆಂಬರ್ 11ರಂದು ನಡೆಯಲಿದೆ.

ಕಳೆದ 12 ತಿಂಗಳುಗಳಿಂದ ಬಿಡುವಿರದಷ್ಟು ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಡೇವಿಡ್ ವಾರ್ನರ್‌, ತಮ್ಮ ಕುಟುಂಬದೊಟ್ಟಿಗೆ ಕಾಲ ಕಳೆಯುವ ಉದ್ದೇಶದಿಂದ ಇದೀಗ ತಂಡ ತೊರೆದಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವೆಬ್‌ಸೈಟ್ ವರದಿ ಮಾಡಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಪ್ರವಾಸಕ್ಕೆ ಡೇವಿಡ್ ವಾರ್ನರ್ ಅಲಭ್ಯರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಈಗಾಗಲೇ ಖಚಿತಪಡಿಸಿದೆ. ಡೇವಿಡ್ ವಾರ್ನರ್‌ ತವರಿನಲ್ಲಿಯೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ನ್ಯೂಜಿಲೆಂಡ್ ಎದುರಿನ ಸರಣಿ ಮುಗಿಸಿಕೊಂಡು, ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಭಾರತ ಪ್ರವಾಸದ ವೇಳೆಯಲ್ಲಿ ಆಸ್ಟ್ರೇಲಿಯಾ ತಂಡವು 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ನಡೆದರೆ, ಸೆಪ್ಟೆಂಬರ್ 23ರಂದು ನಾಗ್ಪುರ ಹಾಗೂ ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ಕೊನೆಯ ಎರಡು ಟಿ20 ಪಂದ್ಯಗಳು ನಡೆಯಲಿವೆ.

ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದ ಸ್ಟೋನಿಸ್: 

ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಮಾರ್ಕಸ್‌ ಸ್ಟೋನಿಸ್ ಸ್ನಾಯು ಸೆಳೆತಕ್ಕೆ(side strain) ಒಳಗಾಗಿದ್ದು, ಕಿವೀಸ್ ಎದುರಿನ ಮೂರನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆಯಲ್ಲಿಯೇ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು. ಹೀಗಾಗಿ ಸ್ಟೋನಿಸ್ ಬದಲಿಗೆ ಆಸ್ಟನ್ ಏಗರ್ ಕ್ಷೇತ್ರರಕ್ಷಣೆ ಮಾಡಿದ್ದರು.

ಆ್ಯರೋನ್ ಫಿಂಚ್ ನಿವೃತ್ತಿ; ಭಾವನ್ಮಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!

ಇದೀಗ ಮಾರ್ಕಸ್‌ ಸ್ಟೋನಿಸ್‌, ಪರ್ತ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಭಾರತ ಪ್ರವಾಸಕ್ಕೂ ಮುನ್ನ ಫಿಟ್ನೆಸ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇದೀಗ ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯಕ್ಕೆ ಮಾರ್ಕಸ್ ಸ್ಟೋನಿಸ್ ಬದಲಿಗೆ ನೇಥನ್ ಎಲ್ಲೀಸ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಮಣೆ ಹಾಕಲಾಗಿದೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಪಂದ್ಯಗಳ ಪೈಕಿ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಇದೀಗ ನ್ಯೂಜಿಲೆಂಡ್ ಎದುರಿನ ಮೂರನೇ ಪಂದ್ಯವು ಆ್ಯರೋನ್ ಫಿಂಚ್ ಪಾಲಿಗೆ ವಿದಾಯದ ಪಂದ್ಯವನ್ನಾಗಿರುವುದರಿಂದ, ಆಸ್ಟ್ರೇಲಿಯಾ ತಂಡವು ಈ ಪಂದ್ಯವನ್ನೂ ಜಯಿಸಿ, ಸರಣಿ ಕ್ಲೀನ್‌ಸ್ವೀಪ್ ಮಾಡುವುದರ ಜತೆಗೆ ಫಿಂಚ್‌ಗೆ ಗೆಲುವಿನ ವಿದಾಯ ನೀಡುವ ಲೆಕ್ಕಾಚಾರದಲ್ಲಿದೆ.