ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ್ದರೂ ರಿಂಕು ಸಿಂಗ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ವೈಟ್ ಬಾಲ್ ಆಟಗಾರನನ್ನಾಗಿ ನೋಡದೆ, ರೆಡ್ ಬಾಲ್ ಕ್ರಿಕೆಟ್‌ನಲ್ಲೂ ರಿಂಕುಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ಆಟಗಾರ ರಿಂಕು ಸಿಂಗ್ ಅವರನ್ನು ಕೇವಲ 'ವೈಟ್ ಬಾಲ್' ಆಟಗಾರನನ್ನಾಗಿ ಮಾತ್ರ ನೋಡಲಾಗುತ್ತಿದೆ. ಮುಂಬರುವ ನ್ಯೂಜಿಲೆಂಡ್ ಸರಣಿಯ ಯಾವುದೇ ಫಾರ್ಮ್ಯಾಟ್‌ನಲ್ಲೂ ರಿಂಕುಗೆ ಅವಕಾಶ ನೀಡಿಲ್ಲ. ಆಯ್ಕೆ ಸಮಿತಿಯ ಈ ನಡೆಯನ್ನು ಟೀಕಿಸಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ರಿಂಕು ಸಿಂಗ್ ಕುರಿತಾದ ಇಂಟ್ರೆಸ್ಟಿಂಗ್ ಅಂಕಿ-ಅಂಶ ಹಂಚಿಕೊಂಡ ಆಕಾಶ್ ಚೋಪ್ರಾ!

ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದರೂ ರಿಂಕು ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವುದು ಅನ್ಯಾಯ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ರಿಂಕು ಇನ್ನು ಎಷ್ಟು ರನ್ ಗಳಿಸಬೇಕು ಎಂದು ಚೋಪ್ರಾ ಪ್ರಶ್ನಿಸಿದ್ದಾರೆ. ತಮ್ಮ ಕೊನೆಯ ಆರು ಇನ್ನಿಂಗ್ಸ್‌ಗಳಲ್ಲಿ ರಿಂಕು ನಾಲ್ಕು ಶತಕ ಸಿಡಿಸಿದ್ದಾರೆ. ಒಂದು ಪಂದ್ಯದಲ್ಲಿ ಇಡೀ ತಂಡವೇ ಕುಸಿದಾಗ ಏಕಾಂಗಿ ಹೋರಾಟ ನಡೆಸಿ 118 ರನ್ ಚಚ್ಚಿದ್ದರು. ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಕನಿಷ್ಠ 50 ಇನ್ನಿಂಗ್ಸ್ ಆಡಿದವರ ಪೈಕಿ ಸರ್ ಡಾನ್ ಬ್ರಾಡ್ಮನ್ ಮತ್ತು ಸರ್ಫರಾಜ್ ಖಾನ್ ಜೊತೆಗೆ ರಿಂಕು ಸಿಂಗ್ ಕೂಡ 61.33 ಸರಾಸರಿ ಹೊಂದಿದ್ದಾರೆ ಎಂದು ಚೋಪ್ರಾ ಅಂಕಿ-ಅಂಶ ಬಿಚ್ಚಿಟ್ಟಿದ್ದಾರೆ. ಹಾಲಿ ನಡೆಯುತ್ತಿರುವ 2026-27ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ವಿರುದ್ಧ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ, ರಿಂಕು ಸಿಂಗ್‌(ಔಟಾಗದೆ 118) ಶತಕದ ಹೊರತಾಗಿಯೂ 202 ರನ್‌ಗೆ ಆಲೌಟಾಗಿದೆ.

2026ರ ಟಿ20 ವಿಶ್ವಕಪ್ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ರಿಂಕುಗೆ ಸರಿಯಾದ ಅವಕಾಶ ಸಿಕ್ಕಿಲ್ಲ. ಬ್ಯಾಟಿಂಗ್ ಆರ್ಡರ್‌ನಲ್ಲಿ ಯಾವುದೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದರೂ ತಂಡಕ್ಕಾಗಿ ರನ್ ಕಲೆಹಾಕುವ ರಿಂಕು ಅವರನ್ನು ದಿಢೀರ್ ಕೈಬಿಟ್ಟು ಬೇರೆಯವರಿಗೆ ಮಣೆ ಹಾಕುವುದು ಸರಿಯಲ್ಲ. ಪ್ರಸ್ತುತ ಭಾರತೀಯ ಟೆಸ್ಟ್ ತಂಡದ ಮಿಡಲ್ ಆರ್ಡರ್‌ನಲ್ಲಿ ಯಾವುದೇ ಕ್ಷಣದಲ್ಲಾದರೂ ಸ್ಥಾನ ಖಾಲಿಯಾಗುವ ಸಾಧ್ಯತೆಯಿದೆ. ಆದರೆ ಬ್ಯಾಕಪ್ ಬ್ಯಾಟರ್ ಆಗಿ ರಿಂಕು ಸಿಂಗ್ ಹೆಸರನ್ನು ಆಯ್ಕೆಗಾರರು ಕನಿಷ್ಠ ಯೋಚಿಸುತ್ತಲೂ ಇಲ್ಲ ಎಂದು ಚೋಪ್ರಾ ಕಿಡಿಕಾರಿದ್ದಾರೆ.

ಮಿಡಲ್ ಆರ್ಡರ್‌ ಬ್ಯಾಕ್‌ಅಪ್‌ಗೆ ಆಕಾಶ್ ಚೋಪ್ರಾ ಕಿವಿಮಾತು:

ಸದ್ಯ ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್, ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಅವರಂತಹ ಬ್ಯಾಟರ್‌ಗಳಿದ್ದಾರೆ. ಆದರೆ ಇವರ ನಂತರ ಬರುವ ಬ್ಯಾಕಪ್ ಮಿಡಲ್ ಆರ್ಡರ್ ಬ್ಯಾಟರ್ ಅನ್ನು ಬೆಳೆಸುವತ್ತ ಮ್ಯಾನೇಜ್‌ಮೆಂಟ್ ಗಮನ ಹರಿಸುತ್ತಿಲ್ಲ. ಈ ಹಿಂದೆ ಸರ್ಫರಾಜ್ ಖಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದರೂ ಆಡಿಸುವ ಗೋಜಿಗೆ ಹೋಗಿರಲಿಲ್ಲ. ರಿಂಕು ಅವರನ್ನು ತಕ್ಷಣವೇ ಟೆಸ್ಟ್ ಆಡಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ ಕನಿಷ್ಠ ಇಂಡಿಯಾ ಎ ತಂಡದ ಪ್ರವಾಸಗಳಲ್ಲಾದರೂ ಅವರನ್ನು ಸೇರಿಸಿ, ರೆಡ್ ಬಾಲ್ ಕ್ರಿಕೆಟ್‌ಗೆ ಪರಿಗಣಿಸಬೇಕು ಎಂದು ಆಕಾಶ್ ಚೋಪ್ರಾ ಆಗ್ರಹಿಸಿದ್ದಾರೆ.