ಪಾಕ್‌ನ ಮತ್ತೆ 7 ಕ್ರಿಕೆಟಿಗರಿಗೆ ಕೊರೋನಾ ಸೋಂಕು
ಪಾಕಿಸ್ತಾನದ ಮತ್ತೆ ಏಳು ಕ್ರಿಕೆಟಿಗರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಪಾಕ್‌ನ 10 ಕ್ರಿಕೆಟಿಗರಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕರಾಚಿ(ಜೂ.24): ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಸಜ್ಜಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಲ್ಲಿ ಕೊರೋನಾ ಸೋಂಕು ಉಲ್ಬಣವಾಗಿದೆ. ಮಂಗಳವಾರ ಮತ್ತೆ 7 ಪ್ರಕರಣಗಳು ಪತ್ತೆಯಾಗಿರುವುದರಿಂದ ಪಾಕ್ ತಂಡದಲ್ಲಿ ಆತಂಕ ಹೆಚ್ಚಾಗಿದೆ.
ಹೌದು, ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟಿಗರಾದ ಮಹಮದ್ ಹಫೀಜ್, ವಹಾಬ್ ರಿಯಾಜ್, ಫಖರ್ ಜಮಾನ್, ರಿಜ್ವಾನ್, ಇಮ್ರಾನ್ ಖಾನ್, ಹಸ್ನೈನ್, ಖಾಸಿಫ್ ಭಟ್ಟಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸೋಮವಾರ ಶದಾಬ್ ಖಾನ್, ಹೈದರ್ ಅಲಿ ಮತ್ತು ಹ್ಯಾರಿಸ್ ರೌಫ್‌ರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಒಟ್ಟಾರೆ ಪಾಕ್ ತಂಡದ 10 ಆಟಗಾರರಲ್ಲಿ ಹಾಗೂ ಸಹಾಯಕ ಸಿಬ್ಬಂದಿ ಮಸ್ಸೂರ್ ಮಲಂಗ್ ಅಲಿಗೆ ಸೋಂಕು ಖಚಿತವಾಗಿದೆ ಎಂದು ಪಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ಮೂವರು ಸ್ಟಾರ್ ಕ್ರಿಕೆಟಿಗರಿಗೆ ಕೊರೋನಾ ಅಟ್ಯಾಕ್..!
ಇದೇ ಜೂನ್ 28ರಂದು 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳನ್ನಾಡಲು ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಪಾಕ್ ತಂಡದ ಆಟಗಾರರಿಗೆ ಸೋಂಕು ತಗುಲಿರುವುದು ದ್ವಿಪಕ್ಷೀಯ ಸರಣಿಯ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.