Asianet Suvarna News Asianet Suvarna News

Rohit Replaced Kohli ಇದೇ ಕಾರಣಕ್ಕೆ ಕ್ಯಾಪ್ಟನ್‌ ಕೊಹ್ಲಿಯನ್ನು ಬಿಸಿಸಿಐ ಕಿತ್ತೊಗೆಯಿತು!

* ಕ್ಯಾಪ್ಟನ್‌ ಕೊಹ್ಲಿಯನ್ನು ಬಿಸಿಸಿಐ ಕಿತ್ತೊಗೆದ್ದಿದ್ದೇಕೆ?
* ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆ ಪರ್ವ
* ವಿರಾಟ್ ಕೊಹ್ಲಿ ಜಾಗಕ್ಕೆ ರೋಹಿತ್ ಶರ್ಮಾ
* ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಅಭಿಮಾನಿಗಳ ಆಕ್ರೋಶ

6 Points why Rohit Sharma replaced Virat Kohli as Team India s white-ball captain mah
Author
Bengaluru, First Published Dec 10, 2021, 3:28 AM IST

ನವದೆಹಲಿ(ಡಿ. 10)  ವಿರಾಟ್‌ ಕೊಹ್ಲಿ (Virat Kohli) ನಿರೀಕ್ಷೆಯಂತೆ ಏಕದಿನ ನಾಯಕತ್ವ ಕಳೆದುಕೊಂಡಿದ್ದಾರೆ. ಆದರೆ ಅವರ ನಿರ್ಗಮನದ ರೀತಿ ಅನಿರೀಕ್ಷಿತ. ಕೊಹ್ಲಿಗೆ ರಾಜೀನಾಮೆ ನೀಡುವಂತೆ ಬಿಸಿಸಿಐ(BCCI) 48 ಗಂಟೆ ಕಾಲಾವಕಾಶ ನೀಡಿತ್ತು, ಆದರೆ ಅವರು ಒಪ್ಪದ ಕಾರಣ ಸ್ವತಃ ಬಿಸಿಸಿಐ ಕಠಿಣ ನಿರ್ಧಾರ ಕೈಗೊಂಡಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ರೋಹಿತ್‌ ಶರ್ಮಾರನ್ನು(Rohit Sharma) ಬಿಸಿಸಿಐ ಏಕದಿನ ತಂಡದ ನಾಯಕನನ್ನಾಗಿ ನೇಮಿಸಿದ ಬಗ್ಗೆ ಕೇವಲ ಒಂದು ಸಾಲಿನಲ್ಲಿ ಪ್ರಕಟಣೆ ಹೊರಡಿಸಿದ್ದು, ಆ ಪ್ರಕಟಣೆಯಲ್ಲಿ ವಿರಾಟ್‌ ಬಗ್ಗೆ ಒಂದಕ್ಷರವೂ ಇಲ್ಲದೆ ಇದ್ದಿದ್ದು, ಬಿಸಿಸಿಐ ಸಿಟ್ಟಿನಿಂದಲೇ ನಿರ್ಧಾರ ಕೈಗೊಂಡಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಭಾರತೀಯ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದ ಕೊಹ್ಲಿಯನ್ನು ಬಿಸಿಸಿಐ ಏಕದಿನ ನಾಯಕತ್ವದಿಂದ ಕಿತ್ತೊಗೆದ್ದಿದ್ದೇಕೆ? ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಮೂಲಗಳ ಪ್ರಕಾರ, ಬಿಸಿಸಿಐ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ. ಆ ವಿವರ ಇಲ್ಲಿದೆ.

1. ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ವಿರಾಟ್‌
ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಅನೇಕ ದ್ವಿಪಕ್ಷೀಯ ಸರಣಿಗಳನ್ನು ಗೆದ್ದು ದಾಖಲೆ ಬರೆದಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 2017ರ ಚಾಂಪಿಯನ್ಸ್‌ ಟ್ರೋಫಿ, 2019ರ ಏಕದಿನ ವಿಶ್ವಕಪ್‌, 2021ರ ಟಿ20 ವಿಶ್ವಕಪ್‌ಗಳನ್ನು ಆಡಿತ್ತು. ಆದರೆ ಚಾಂಪಿಯನ್‌ ಆಗಿರಲಿಲ್ಲ.

2. ಟಿ20, ಏಕದಿನಕ್ಕೆ ಒಬ್ಬರೇ ನಾಯಕರಿದ್ದರೆ ಸೂಕ್ತ:
ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸಿದ ಬಳಿಕ ಏಕದಿನ ನಾಯಕತ್ವದಲ್ಲೂ ಮುಂದುವರಿಯುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು. ಬಿಸಿಸಿಐ ಕೂಡ ಇದೇ ಆಲೋಚನೆಯಲ್ಲಿತ್ತು. ತಂಡದ ಹಿತದೃಷ್ಟಿಯಿಂದ ಟಿ20, ಏಕದಿನ ತಂಡಗಳಿಗೆ ಒಬ್ಬರೇ ನಾಯಕರಾದರೆ ಸೂಕ್ತ ಎನ್ನುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿತು. ಟೆಸ್ಟ್‌ನಲ್ಲಿ ಕೊಹ್ಲಿ ಮುಂದುವರಿಯಲಿದ್ದು, ಸೀಮಿತ ಓವರ್‌ ತಂಡಗಳನ್ನು ರೋಹಿತ್‌ ಮುನ್ನಡೆಸಿದರೆ ತಂಡದ ಪ್ರದರ್ಶನ ಉತ್ತಮವಾಗಿರಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಬಿಸಿಸಿಐ ಅಧಿಕಾರಿಗಳು, ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ತಂಡಗಳನ್ನು ಉದಾಹರಣೆಯಾಗಿಟ್ಟುಕೊಂಡು ಪ್ರತ್ಯೇಕ ನಾಯಕತ್ವದ ಮೊರೆ ಹೋದರು.

ಮುಗಿದ ಒಂದು ಅಧ್ಯಾಯ, ನಾಯಕ ಕೊಹ್ಲಿ ದಾಖಲೆಗಳು

3. ಸಹ ಆಟಗಾರರ ಜೊತೆ ಸಂವಹನ ಕೊರತೆ? 
ಎಂ.ಎಸ್‌.ಧೋನಿ (MS Dhoni) ನಾಯತ್ವದಿಂದ ಕೆಳಗಿಳಿದ ಬಳಿಕ ಬಿಸಿಸಿಐನ ನೆಚ್ಚಿನ ನಾಯಕನಾಗಿದ್ದ ಕೊಹ್ಲಿ, ಕಳೆದೊಂದು ವರ್ಷದಿಂದ ಸಹ ಆಟಗಾರರ ಜೊತೆ ಸರಿಯಾಗಿ ಸಂವಹನ ನಡೆಸುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಆರೋಗ್ಯಕರ ವಾತಾವರಣವಿರಲಿಲ್ಲ. ಸಹ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿಯೂ ಕೊಹ್ಲಿ ಹಿಂದೆ ಬಿದ್ದಿದ್ದರು ಎನ್ನಲಾಗಿದೆ.

4. ಆಟಗಾರರ ನಿರ್ವಹಣೆಯಲ್ಲೂ ಎಡವಟ್ಟು? 
ಸಹ ಆಟಗಾರರಿಗೆ ಅವರ ಜವಾಬ್ದಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಕೊಹ್ಲಿ ವಿಫಲರಾಗಿದ್ದರು ಎನ್ನಲಾಗಿದೆ. ಯಾವ ಆಟಗಾರನಿಂದ ತಂಡ ಏನು ನಿರೀಕ್ಷೆ ಮಾಡುತ್ತಿದೆ ಎನ್ನುವುದನ್ನು ಕೊಹ್ಲಿ ತಿಳಿಸುತ್ತಿರಲ್ಲ ಎಂದು ಕೆಲ ಆಟಗಾರರು ಆರೋಪಿಸಿದ್ದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇನ್ನು ಆಟಗಾರರ ನಿರ್ವಹಣೆಯಲ್ಲೂ ಕೊಹ್ಲಿ ಎಡವಿದ್ದು ಸ್ಪಷ್ಟವಾಗಿ ಕಂಡುಬಂದಿದೆ. ಉದಾಹರಣೆ ಕುಲ್ದೀಪ್‌ ಯಾದವ್‌ರನ್ನು ಏತಕ್ಕಾಗಿ ತಂಡದಿಂದ ಹೊರಗಿಡಲಾಗಿದೆ ಎನ್ನುವುದಕ್ಕೆ ಕೊಹ್ಲಿ ಬಳಿ ಉತ್ತರವಿರಲಿಲ್ಲ. ಆರ್‌.ಅಶ್ವಿನ್‌ರನ್ನು ಆಡುವ ಹನ್ನೊಂದರಿಂದ ದೂರವಿಟ್ಟು ಟೀಕೆಗೂ ಗುರಿಯಾಗಿದ್ದರು.

5. ಕೋಚ್‌ ಕುಂಬ್ಳೆ ಜೊತೆ ಮನಸ್ತಾಪ ಮುಳ್ಳಾಯ್ತಾ?
ವಿರಾಟ್‌ ಕೊಹ್ಲಿ ಜೊತೆ ಹೊಂದಾಣಿಕೆ ಸಮಸ್ಯೆಯಿಂದಾಗಿ ಅನಿಲ್‌ ಕುಂಬ್ಳೆ ಒಂದು ವರ್ಷದ ಬಳಿಕ ಪ್ರಧಾನ ಕೋಚ್‌ ಸ್ಥಾನದಿಂದ ಕೆಳಗಿಳಿದಿದ್ದರು. ಇದು ಬಿಸಿಸಿಐಗೆ ಮುಜುಗರ ತಂದಿತ್ತು. ಕುಂಬ್ಳೆಯಂತಹ ಹಿರಿಯ ಕ್ರಿಕೆಟಿಗನನ್ನು ಕೊಹ್ಲಿ ನಡೆಸಿಕೊಂಡ ರೀತಿ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

6. ರೋಹಿತ್‌ ನಾಯಕತ್ವ ಗುಣ ಮೆಚ್ಚಿದ ಬಿಸಿಸಿಐ!
ಒಂದೆಡೆ ಕೊಹ್ಲಿ ಸಹ ಆಟಗಾರರೊಂದಿಗಿನ ಬಾಂಧವ್ಯ, ತಂಡದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ರೋಹಿತ್‌ ಎಲ್ಲಾ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಒಬ್ಬ ಆಟಗಾರ ಲಯದ ಸಮಸ್ಯೆ ಇಲ್ಲವೇ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆ ಆಟಗಾರನನ್ನು ರೋಹಿತ್‌, ಹೊರಗೆ ಊಟಕ್ಕೆ ಕೊರೆದೊದ್ದು ಸಮಸ್ಯೆಗಳನ್ನು ಆಲಿಸಿ ತಮ್ಮಿಂದಾದ ಸಹಾಯ ಮಾಡುತ್ತಿದ್ದರು. ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ಹೇಳುತ್ತಿದ್ದರು ಎಂದು ಹಲವರು ಹೇಳಿಕೊಂಡಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ರೋಹಿತ್‌ ತೋರಿದ ನಾಯಕತ್ವ ಗುಣಗಳನ್ನು ಮೆಚ್ಚಿ ಬಿಸಿಸಿಐ ಅವರಿಗೆ ಮಣೆ ಹಾಕಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios