ಮೂರನೇ ಆವೃತ್ತಿಯ ಮಹಾರಾಜ ಟಿ20 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇಂದು ಚುಟುಕು ಕ್ರಿಕೆಟ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿಗೆ ಗುರುವಾರ ಚಾಲನೆ ದೊರೆಯಲಿದೆ. ಎರಡೂವರೆ ವಾರಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಫೈನಲ್‌ ಸೇರಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಈ ಮೊದಲು ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಹೆಸರಿನಲ್ಲಿ ನಡೆಯುತ್ತಿದ್ದ ಟೂರ್ನಿಯು, 2019ರಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಕೇಳಿ ಬಂದ ಕಾರಣ ಸ್ಥಗಿತಗೊಳಿಸಲಾಗಿತ್ತು. ಬಳಿಕ 2022ರಲ್ಲಿ ಮಹಾರಾಜ ಟ್ರೋಫಿ ಹೆಸರಿನಲ್ಲಿ ಟೂರ್ನಿಯನ್ನು ಪುನಾರಂಭಿಸಲಾಯಿತು.

ಮೊದಲ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡ ಚಾಂಪಿಯನ್‌ ಆದರೆ, 2023ರಲ್ಲಿ ಅಂದರೆ ಕಳೆದ ಆವೃತ್ತಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಪ್ರಶಸ್ತಿ ಎತ್ತಿಹಿಡಿದಿತ್ತು.

ಕನ್ನಡ ಬಿಗ್ ಬಾಸ್‌ ಸ್ಟಾರ್, ಇಂಟರ್‌ನ್ಯಾಷನಲ್ ಕ್ರಿಕೆಟ್ ತಂಡದ ಕೋಚ್..!

ಬೆಂಗಳೂರಲ್ಲೇ ಎಲ್ಲಾ ಪಂದ್ಯಗಳು

ಟೂರ್ನಿಯ ಎಲ್ಲಾ 33 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ. ಇದಕ್ಕಾಗಿ ಕೆಎಸ್‌ಸಿಎ ಹಲವು ಪಿಚ್‌ಗಳನ್ನು ಸಿದ್ಧಪಡಿಸಿದ್ದು, ಟೂರ್ನಿಯ ಪ್ರತಿ ಪಂದ್ಯವೂ ಸ್ಪರ್ಧಾತ್ಮಕವಾಗಿರುವಂತೆ ನೋಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.

ಟೂರ್ನಿ ಮಾದರಿ ಹೇಗೆ?

ಲೀಗ್‌ ಹಂತ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡವು ಉಳಿದ 5 ತಂಡಗಳ ವಿರುದ್ಧ ತಲಾ 2 ಬಾರಿ ಆಡಲಿದೆ. ಆ.29ರ ವರೆಗೂ ಲೀಗ್‌ ಪಂದ್ಯಗಳು ನಡೆಯಲಿವೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. 

ಮೊದಲ ಸ್ಥಾನ ಪಡೆದ ತಂಡ 4ನೇ ಸ್ಥಾನ ಪಡೆದ ತಂಡದ ವಿರುದ್ಧ ಆಡಲಿದ್ದು, ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದ ತಂಡಗಳು ಮತ್ತೊಂದು ಸೆಮೀಸ್‌ನಲ್ಲಿ ಮುಖಾಮುಖಿಯಾಗಲಿವೆ. ಆ.30, 31ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಸೆ.1ಕ್ಕೆ ಫೈನಲ್‌ ನಿಗದಿಯಾಗಿದೆ. 2 ಪಂದ್ಯಗಳು ಇರುವ ದಿನಗಳಂದು ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ, 2ನೇ ಪಂದ್ಯ ಸಂಜೆ 7ಕ್ಕೆ ಆರಂಭಗೊಳ್ಳಲಿದೆ. ಸೆಮೀಸ್‌, ಫೈನಲ್‌ ಪಂದ್ಯಗಳು ಸಂಜೆ 7ಕ್ಕೆ ಶುರುವಾಗಲಿವೆ.

ಒಲಿಂಪಿಕ್ ಗೋಲ್ಡನ್ ಬಾಯ್‌ ಯುಲೋಗೆ ಜೀವನಪೂರ್ತಿ ಉಚಿತ ಊಟ! ಐಶಾರಾಮಿ ಮನೆ ಗಿಫ್ಟ್

ಇಂದು ಬೆಂಗಳೂರು vs ಗುಲ್ಬರ್ಗಾ, ಶಿವಮೊಗ್ಗ vs ಮೈಸೂರು ಸೆಣಸು

ಉದ್ಘಾಟನಾ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್‌ ಗುಲ್ಬರ್ಗಾ ಮಿಸ್ಟಿಕ್ಸ್‌ ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌ ಸೆಣಸಲಿದ್ದು, ದಿನದ 2ನೇ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಮೈಸೂರು ವಾರಿಯರ್ಸ್‌ಗೆ ಶಿವಮೊಗ್ಗ ಲಯನ್ಸ್‌ ಎದುರಾಗಲಿದೆ. 2ನೇ ದಿನದ ಮೊದಲ ಪಂದ್ಯದಲ್ಲಿ ಉಳಿದ ಎರಡು ತಂಡಗಳಾದ ಹುಬ್ಬಳ್ಳಿ ಟೈಗರ್ಸ್‌ ಹಾಗೂ ಮಂಗಳೂರು ಡ್ರ್ಯಾಗನ್ಸ್‌ ಮುಖಾಮುಖಿಯಾಗಲಿವೆ.