ಬೆಂಗಳೂರು[ನ.15]: ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಎಂದುಕೊಂಡರೆ, ಸಚಿನ್ ತೆಂಡುಲ್ಕರ್ ದೇವರು ಎನ್ನುವ ಮಾತೊಂದಿದೆ. ಸಚಿನ್ ತೆಂಡುಲ್ಕರ್ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ ಮಾಂತ್ರಿಕ ಕ್ರಿಕೆಟಿಗ. ಅದು 1989 ನವೆಂಬರ್ 15 ವಿಶ್ವಕ್ರಿಕೆಟ್’ನಲ್ಲಿ 2 ಅದ್ಭುತಗಳು ನಡೆದವು. ಸಚಿನ್ ತೆಂಡುಲ್ಕರ್ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರೆ, ವೇಗಿ ವಖಾರ್ ಯೂನಿಸ್ ಪಾಕ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಆ ಬಳಿಕ ಸಚಿನ್ ತೆಂಡುಲ್ಕರ್ ಕ್ರಿಕೆಟ್ ದೇವರಾಗಿ ಬೆಳೆದು ನಿಂತದ್ದು ಕಾಲದ ಅಚ್ಚರಿ. ಆ ಅದ್ಭುತ ದಿನಕ್ಕೆ ಇಂದಿಗೆ 30 ವರ್ಷದ ಸಂಭ್ರಮ.

ಹೌದು, ನವೆಂಬರ್ 15, 1989ರಲ್ಲಿ ಪಾಕಿಸ್ತಾನ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. 16 ವರ್ಷದ ಹಾಲುಗಲ್ಲದ ಹುಡುಗ ಆ ನಂತರ 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದು ನಮ್ಮ ಕಣ್ಣು ಮುಂದೆಯೇ ನಡೆದ ಅಚ್ಚರಿ. ಹಲವಾರು ಅಪರೂಪದ ದಾಖಲೆಯ ಒಡೆಯ, ಮಾಸ್ಟರ್ ಬ್ಲಾಸ್ಟರ್ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದರೂ ಅವರ ಅಭಿಮಾನಿಗಳು ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

INDvBAN: ಮಯಾಂಕ್ ದ್ವಿಶತಕ; 493 ರನ್ ಸಿಡಿಸಿದ ಭಾರತ!

ಸಚಿನ್ ತೆಂಡುಲ್ಕರ್ ಈಗಾಗಲೇ ಹಲವಾರು ಮೊದಲ ದಾಖಲೆಗಳ ಒಡೆಯ ಎನಿಸಿದ್ದಾರೆ. 200 ಟೆಸ್ಟ್ ಪಂದ್ಯವನ್ನಾಡಿದ ಮೊದಲ ಕ್ರಿಕೆಟಿಗ, ಏಕದಿನ ಕ್ರಿಕೆಟ್’ನಲ್ಲಿ 200 ರನ್ ಬಾರಿಸಿದ ಮೊದಲ ಕ್ರಿಕೆಟಿಗ, 100 ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಸೇರಿದಂತೆ ಇನ್ನೂ ಹಲವಾರು ದಾಖಲೆಗಳು ಕ್ರಿಕೆಟ್ ದೇವರ ಹೆಸರಿನಲ್ಲಿದೆ. 

ಸಚಿನ್ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳಿಂದ 53.8ರ ಸರಾಸರಿಯಲ್ಲಿ 15,921 ರನ್ ಬಾರಿಸಿದ್ದರು. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕಗಳು ಸೇರಿವೆ. ಇನ್ನು 463 ಏಕದಿನ ಪಂದ್ಯಗಳನ್ನಾಡಿ 44.8ರ ಸರಾಸರಿಯಲ್ಲಿ 49 ಶತಕ ಹಾಗೂ 96 ಅರ್ಧಶತಕಗಳು ಸೇರಿವೆ.

ಈ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದು, ’ಇದು ನಾನು ಹೆಚ್ಚು ಹೆಚ್ಚು ಇಷ್ಟಪಟ್ಟು ಮಾಡುವ ಕೆಲಸ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಪದಾರ್ಪಣೆಯ ದಿನವನ್ನು ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ನೆನಪು ಮಾಡಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.