ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಸುರೇಶ್‌ ರೈನಾ ಕುಟುಂಬಸ್ಥರ ಮೇಲಿನ ದಾಳಿ ಪ್ರಕರಣವನ್ನು ಬೇಧಿಸುವಲ್ಲಿ ಪಂಜಾಬ್‌ ಪೊಲೀಸರು ಯಶಸ್ವಿಯಾಗಿದ್ದಾರೆ. 

ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಬುಧವಾರ ಮಾಹಿತಿ ನೀಡಿದ್ದಾರೆ. ಅಂತಾರಾಜ್ಯ ದರೋಡೆಕೋರರ ತಂಡ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಖಚಿತವಾಗಿದೆ. 3 ಆರೋಪಿಗಳ ಬಂಧನವಾಗಿದ್ದು, ಇನ್ನು 11 ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದಿದ್ದಾರೆ.

ಆ.19ರಂದು ಪಠಾಣಕೋಟ್‌ ಜಿಲ್ಲೆಯ ತರಾರ‍ಯಲ್‌ ಗ್ರಾಮದ ಮನೆಯ ಮಹಡಿ ಮೇಲೆ ಮಲಗಿದ್ದ ಕುಟುಂಬಸ್ಥರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ರೈನಾ ಅವರ ಮಾವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರ ಗಾಯಗೊಂಡಿದ್ದ ಕೌಶಲ್‌ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಅವರ ಪತ್ನಿ ಆಶಾರಾಣಿ ಆರೋಗ್ಯ ಈಗಲೂ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪಂಜಾಬ್‌ ಪೊಲೀಸರು ಹಾಗೂ ಮುಖ್ಯಮಂತ್ರಿಗಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಧನ್ಯವಾದ ಹೇಳಿದ್ದಾರೆ.

IPL 2020: ಸುರೇಶ್ ರೈನಾ ಸ್ಥಾನವನ್ನು ಈ ಆಟಗಾರ ತುಂಬಲಿದ್ದಾರೆ ಎಂದು ಶೇನ್ ವಾಟ್ಸನ್..!

ಹತ್ತಿರ ಸಂಬಂಧಿಕರ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದ ಸುರೇಶ್ ರೈನಾ ದುಬೈನಿಂದ ಆಗಸ್ಟ್ 29ರಂದು ದಿಢೀರನೇ ಭಾರತಕ್ಕೆ ವಾಪಾಸಾಗಿದ್ದರು. ಇದಕ್ಕೂ ಮೊದಲು 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸುರೇಶ್ ರೈನಾ ಚೆನ್ನೈ ಸೂಪರ್‌ ಕಿಂಗ್ಸ್ ತಂಡದೊಂದಿಗೆ ದುಬೈಗೆ ತೆರಳಿದ್ದರು.