2ನೇ ಟಿ20: ಭಾರತಕ್ಕೆ ಸುಲಭ ಗುರಿ ನೀಡಿದ ಲಂಕಾ
ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಲಂಕಾ ಕೇವಲ 142 ರನ್ ಬಾರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಇಂದೋರ್[ಜ.07]: ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಶ್ರೀಲಂಕಾ ನಿಗದಿತ 20 ಓವರ್’ಗಳಲ್ಲಿ ಕೇವಲ 142 ರನ್ ಗಳನ್ನಷ್ಟೇ ಬಾರಿಸಲು ಶಕ್ತವಾಗಿದೆ. ಈ ಮೂಲಕ ಭಾರತಕ್ಕೆ ಸುಲಭ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಆವಿಷ್ಕಾ ಫರ್ನಾಂಡೊ-ಧನುಷ್ಕಾ ಗುಣತಿಲಕಾ 38 ರನ್’ಗಳ ಜತೆಯಾಟವಾಡಿದರು. ಫರ್ನಾಂಡೊ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 22 ರನ್ ಬಾರಿಸಿ ವಾಷಿಂಗ್ಟನ್ ಸುಂದರ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಗುಣತಿಲಕ 20 ರನ್ ಬಾರಿಸಿ ಸೈನಿ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕುಸಾಲ್ ಪೆರೆರಾ 3 ಸಿಕ್ಸರ್ ಸಿಡಿಸಿ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದರು. ಆದರೆ ಕುಲ್ದೀಪ್ ಬೌಲಿಂಗ್’ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. 34 ರನ್ ಬಾರಿಸಿದ್ದ ಪೆರೆರಾ, ಧವನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ನಾಟಕೀಯ ಕುಸಿತ: ಒಂದು ಹಂತದಲ್ಲಿ 96 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಲಂಕಾ ತಂಡ ಪೆರೆರಾ ವಿಕೆಟ್ ಬೀಳುತ್ತಿದ್ದಂತೆ ನಾಟಕೀಯ ಕುಸಿತ ಕಂಡಿತು. ಇದಾದ ಬಳಿಕ ಧನಂಜಯ ಡಿಸಿಲ್ವಾ ಹಾಗೂ ವನಿದು ಹಸರಂಗ 16 ರನ್ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ.
ಶಾರ್ದೂಲ್ ಠಾಕೂರ್ ಒಂದೇ ಓವರ್’ನಲ್ಲಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಭಾರತ ಪರ ಠಾಕೂರ್ 3 ವಿಕೆಟ್ ಪಡೆದರೆ, ಕುಲ್ದೀಪ್ ಹಾಗೂ ಸೈನಿ ತಲಾ ಎರಡೆರಡು ವಿಕೆಟ್ ಪಡೆದರು. ಇನ್ನು ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.