Asianet Suvarna News Asianet Suvarna News

IPL Retention: ಕ್ಯಾಪ್ಟನ್‌ ಕೇನ್‌, ಮೂವರು ಕನ್ನಡಿಗರಿಗೆ ಸನ್‌ರೈಸರ್ಸ್‌ ಗೇಟ್‌ಪಾಸ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 2023ರ ಐಪಿಎಲ್‌ ಹರಾಜಿಗೆ ತನ್ನ 12 ಆಟಗಾರರನ್ನು ಬಿಡುಗಡೆ ಮಾಡಿದೆ. ನಾಯಕ ಕೇನ್‌ ವಿಲಿಯಮ್ಸ್‌ ಅವರನ್ನು ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿದ್ದರೆ, ತಂಡದಲ್ಲಿದ್ದ ಮೂವರು ಕನ್ನಡಿಗರು ಕೂಡ ನಿರ್ಗಮನ ಕಂಡಿದ್ದಾರೆ.
 

2023 IPL Retention Sunrisers Hyderabad have released 12 Players Include Kane Williamson san
Author
First Published Nov 15, 2022, 7:14 PM IST

ಹೈದರಾಬಾದ್‌ (ನ.15): ಮಾಜಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನಲ್ಲಿದ್ದ ಇಬ್ಬರು ರಾಷ್ಟ್ರೀಯ ತಂಡದ ನಾಯಕರನ್ನು 2023ರ ಐಪಿಲ್‌ ಹರಾಜಿಗೆ ಬಿಟ್ಟಿದೆ. ಫ್ರಾಂಚೈಸಿಯ ಕ್ಯಾಪ್ಟನ್‌ ಕೂಡ ಆಗಿದ್ದ ಕೇನ್‌ ವಿಲಿಯಮ್ಸನ್‌ ಹಾಗೂ ವೆಸ್ಟ್‌ ಇಂಡೀಸ್‌ ಟಿ20 ತಂಡದ ನಾಯಕನಾಗಿರುವ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಅವರನ್ನು ತಂಡದಿಂದ ಹೊರಹಾಕಿದೆ. ಅದರೊಂದಿಗೆ ಫ್ರಾಂಚೈಸಿಯಲ್ಲಿದ್ದ ಮೂವರು ಕರ್ನಾಟಕ ಆಟಗಾರರಾದ ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌ ಹಾಗೂ ರವಿಕುಮಾರ್‌ ಸಮರ್ಥ್‌ ಕೂಡ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಕೇನ್‌ ವಿಲಿಯಮ್ಸ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅತ್ಯಂತ ದುಬಾರಿ ಆಟಗಾರನಾಗಿದ್ದರು. ಬರೋಬ್ಬರಿ 14 ಕೋಟಿ ರೂಪಾಯಿ ಮೊತ್ತವನ್ನು ಕೇನ್‌ ವಿಲಿಯಮ್ಸನ್‌ಗೆ ತಂಡ ನೀಡುತ್ತಿತ್ತು. 8 ವರ್ಷಗಳ ಕಾಲ ಅವರು ತಂಡದಲ್ಲಿ ಸ್ಥಾನಪಡೆದಿದ್ದರು. ಸನ್‌ರೈಸರ್ಸ್‌ ಪರವಾಗಿ 36.22ರ ಸರಾಸರಿಯಲ್ಲಿ 126.03 ಸ್ಟ್ರೈಕ್‌ರೇಟ್‌ನಲ್ಲಿ  2101 ರನ್‌ ಬಾರಿಸಿದ್ದರು. ಸನ್‌ರೈಸರ್ಸ್‌ ಹೈದರಾಬಾದ್‌ ಪರವಾಗಿ 76 ಪಂದ್ಯಗಳನ್ನು ಆಡಿದ್ದು, 46 ಪಂದ್ಯಗಳಲ್ಲಿ ನಾಯಕರಾಗಿದ್ದರು.

ಕೇನ್‌ ವಿಲಿಯಮ್ಸನ್‌ ಕಳೆದ ಬಾರಿಯ ಹರಾಜಿಗೂ ಮುನ್ನ ಸನ್‌ರೈಸರ್ಸ್‌ ತಂಡದ ಮೊದಲ ಆಯ್ಕೆಯ ರಿಟೆನ್ಷನ್‌ ಆಗಿದ್ದರು. ಹಾಗಾಗಿ ಅವರು 14 ಕೋಟಿ ರೂಪಾಯಿ ಮೊತ್ತ ಪಡೆದಿದ್ದರು. ಸನ್‌ರೈಸರ್ಸ್‌ ತಂಡ ಇವರನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿ ಪ್ರಮುಖ ಲೆಗ್‌ಸ್ಪಿನ್ನರ್‌ ಆಗಿದ್ದ ಅಫ್ಘಾನಿಸ್ತಾನದ ರಶೀದ್‌ ಖಾನ್‌ರನ್ನು ತಂಡದಿಂದ ಕೈಬಿಡುವ ಪ್ರಮಾದ ಮಾಡಿತ್ತು. ರಶೀದ್‌ ಖಾನ್‌ ಬಳಿಕ ಗುಜರಾತ್‌ ಟೈಟಾನ್ಸ್‌ ಪಾಲಾಗಿದ್ದರು.

IPL Retention ಚಾಂಪಿಯನ್ ಗುಜರಾತ್ ಟೈಟಾನ್ಸ್‌ನಿಂದ ಜೇಸನ್ ರಾಯ್ ಸೇರಿ 6 ಕ್ರಿಕೆಟಿಗರ ಬಿಡುಗಡೆ!

ಈಗ ವಿಲಿಯಮ್ಸನ್‌ ಅವರನ್ನು ತಂಡದಿಂದ ಕೈಬಿಟ್ಟಿರುವ ಕಾರಣ, ಸನ್‌ರೈಸರ್ಸ್‌ ತಂಡದಲ್ಲಿ ಹೆಚ್ಚಿನ ಹಣ ಹರಾಜಿಗೆ ಉಳಿಯಲಿದೆ. ಅದಲ್ಲದೆ, 10.75 ಕೋಟಿ ರೂಪಾಯಿಗೆ ಖರೀದಿಸಿದ್ದ ಪೂರನ್‌ ಅವರನ್ನು ಹೊರಹಾಕಿದೆ. ಕೇವಲ ಎರಡೇ ಆಟಗಾರರನ್ನು ಹೊರಹಾಕುವ ಮೂಲಕ 24.75 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಇವರಿಬ್ಬರನ್ನೂ ಮುಂಬರುವ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೂ ಖರೀದಿ ಮಾಡುವ ಅವಕಾಶ ಹೊಂದಿದೆ. ಅದಲ್ಲದೆ, ಈವರೆಗೂ ಹೊಸ ನಾಯಕನನ್ನು ಘೋಷಣೆ ಮಾಡದೇ ಇರುವ ಕಾರಣ ಸನ್‌ರೈಸರ್ಸ್‌ ತಂಡ ಕಾದು ನೋಡುವ ತಂತ್ರದಲ್ಲಿದೆ.

IPL Retention: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಡ್ವೇನ್‌ ಬ್ರಾವೋ ಔಟ್‌!

ಇನ್ನು ಪೂರನ್‌ ಪಾಲಿಗೆ ಅವರ ಕಳಪೆ ಫಾರ್ಮ್‌ ತಂಡದಿಂದ ಹೊರಬೀಳಲು ಕಾರಣವಾಗಿದೆ. ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿಯೇ ಐರ್ಲೆಂಡ್‌ ಹಾಗೂ ಸ್ಕಾಟ್ಲೆಂಡ್‌ ತಂಡಗಳಿಗೆ ಸೋತು ವಿಂಡೀಸ್ ತಂಡ ಹೊರಬಿದ್ದಿತ್ತು. ಆಡಿದ ಮೂರು ಇನ್ನಿಂಗ್ಸ್‌ಗಳಿಂದ ಕೇವಲ 25 ರನ್‌ ಬಾರಿಸಲಷ್ಟೇ ಪೂರನ್‌ ಯಶ ಕಂಡಿದ್ದರು. ಅದಲ್ಲದೆ ಅವರ ಸ್ಟ್ರೈಕ್‌ ರೇಟ್‌ ಕೇವಲ 86 ಆಗಿತ್ತು.
ನಾಲ್ಕು ವಿದೇಶಿ ಪ್ಲೇಯರ್‌ಗಳನ್ನು ತಂಡಕ್ಕೆ ಆಯ್ಕೆ ಮಾಡುವುದರೊಂದಿಗೆ ನಾಯಕನನ್ನು ಆಯ್ಕೆ ಮಾಡಬೇಕಾದ ತಲೆಬಿಸಿಯೂ ತಂಡದ ಮುಂದಿದೆ. ಯುವ ಆಟಗಾರರನ್ನು ಒಳಗೊಂಡ, ವೇಗಿಗಳೇ ತುಂಬಿರುವ ಸನ್‌ರೈಸರ್ಸ್‌ ತಂಡವಾಗಿ ಕಾಣುತ್ತಿದೆ. ವಾಷಿಂಗ್ಟನ್‌ ಸುಂದರ್‌ ಅಥವಾ ಅಭಿಷೇಕ್‌ ಶರ್ಮಗೆ ನಾಯಕ ಸ್ಥಾನ ನೀಡುವ ಸರ್ಕಸ್‌ ಕೂಡ ಮಾಡಬಹುದು. 

ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ:

ಬಿಡುಗಡೆಯಾದ ಆಟಗಾರರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಪ್ರಿಯಮ್ ಗಾರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೋ ಶೆಫರ್ಡ್, ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್.

ಟ್ರೇಡಿಂಗ್‌ ಮೂಲಕ ಆಟಗಾರರ ಆಯ್ಕೆ: ಯಾರೂ ಇಲ್ಲI ತಂಡದಲ್ಲಿ ಇರುವ ಹಣ: 42.25 ಕೋಟಿ ರೂಪಾಯಿI ವಿದೇಶಿ ಆಟಗಾರರ ಕೋಟಾ ಬಾಕಿ: 4
ಹಾಲಿ ತಂಡ: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
 

Follow Us:
Download App:
  • android
  • ios