2 ಬಾರಿಯ T20 World Cup ಚಾಂಪಿಯನ್ ವಿಂಡೀಸ್ ಅರ್ಹತಾ ಸುತ್ತಿನಲ್ಲೇ ಔಟ್, ಸೋಷಿಯಲ್ ಮೀಡಿಯಾದಲ್ಲಿ ರೋಸ್ಟ್..!
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ವೆಸ್ಟ್ ಇಂಡೀಸ್ ಔಟ್
* ಅರ್ಹತಾ ಸುತ್ತಿನಲ್ಲೇ ಹೊರಬಿದ್ದ ನಿಕೋಲಸ್ ಪೂರನ್ ಪಡೆ
* ಹೀನಾಯ ಪ್ರದರ್ಶನದ ಬೆನ್ನಲ್ಲೇ ಎರಡು ಬಾರಿಯ ಚಾಂಪಿಯನ್ ವಿಂಡೀಸ್ ಟ್ರೋಲ್
ಹೋಬರ್ಟ್(ಅ.21): ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು, ಐರ್ಲೆಂಡ್ ಎದುರು ಹೀನಾಯ ಸೋಲು ಕಾಣುವ ಮೂಲಕ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದೆ. ವೆಸ್ಟ್ ಇಂಡೀಸ್ ತಂಡವು 2012 ಹಾಗೂ 2016ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಇದೀಗ ನಿಕೋಲಸ್ ಪೂರನ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವು, ಐರ್ಲೆಂಡ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಅರ್ಹತಾ ಸುತ್ತಿನಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ಕಳೆದುಕೊಂಡು ಕೇವಲ 146 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬ್ರೆಂಡನ್ ಕಿಂಗ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ವಿಂಡೀಸ್ ತಂಡದ ಪರ ಜಬಾಬ್ದಾರಿಯುತ ಪ್ರದರ್ಶನ ತೋರಲು ಯಶಸ್ವಿಯಾಗಲಿಲ್ಲ. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 17.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಐರ್ಲೆಂಡ್, ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟರೇ, ವೆಸ್ಟ್ ಇಂಡೀಸ್ ತಂಡವು ತವರಿನತ್ತ ಮುಖ ಮಾಡಿದೆ.
ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಹಾಗೂ ಆಕ್ರೋಶಗಳು ವ್ಯಕ್ತವಾಗಿವೆ. ವಿಂಡೀಸ್ ತಂಡದ ಆಟಗಾರರು ಐಪಿಎಲ್ ಆಡುವಾಗ ಹುಲಿ, ರಾಷ್ಟ್ರೀಯ ತಂಡಗಳ ಪರ ಆಡುವಾಗ ಇಲಿ ಎನ್ನುವಂತಹ ಕಾಮೆಂಟ್‌ಗಳು ವ್ಯಕ್ತವಾಗಿವೆ. ಮತ್ತೆ ಕೆಲವರು ವೆಸ್ಟ್ ಇಂಡೀಸ್ ಮ್ಯಾನೇಜ್‌ಮೆಂಟ್ ತಮ್ಮ ತಂಡದ ಆಟಗಾರರ ಬಗ್ಗೆ, ಬಲಿಷ್ಠ ತಂಡ ಕಟ್ಟುವ ಬಗ್ಗೆ ಇನ್ನಾದರೂ ಹೆಚ್ಚಿನ ಗಮನಕೊಡಲಿ ಎಂದು ಕಿವಿಮಾತು ಹೇಳಿದ್ದಾರೆ. ಐರ್ಲೆಂಡ್ ತಂಡವು ಸೂಪರ್ 12 ಹಂತಕ್ಕೆ ಟಿಕೆಟ್ ಬುಕ್ ಮಾಡಿಕೊಂಡರೆ, ವೆಸ್ಟ್ ಇಂಡೀಸ್ ಮನೆಗೆ ಟಿಕೆಟ್ ಬುಕ್ ಮಾಡಿತು ಎಂದು ಟ್ರೋಲ್ ಮಾಡಿದ್ದಾರೆ.
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, ಆರಂಭಿಕ ವಿಕೆಟ್ ಪತನದ ಹೊರತಾಗಿಯೂ, ಬ್ರೆಂಡನ್ ಕಿಂಗ್ ಕೇವಲ 48 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಆದರೆ ನಾಯಕ ನಿಕೋಲಸ್ ಪೂರನ್ ಸೇರಿದಂತೆ ಉಳಿದ ವಿಂಡೀಸ್ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ಕಳೆದುಕೊಂಡು ಕೇವಲ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಐರ್ಲೆಂಡ್ ತಂಡದ ಪರ ಗೆರಾತ್ ಡೆಲ್ನೆ 16 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.
T20 World Cup ಎರಡು ಬಾರಿ ಚಾಂಪಿಯನ್ ವಿಂಡೀಸ್ ಹೊರದಬ್ಬಿ ಸೂಪರ್ 12 ಪ್ರವೇಶಿಸಿದ ಐರ್ಲೆಂಡ್..!
ಇನ್ನು ವೆಸ್ಟ್ ಇಂಡೀಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ನಾಯಕ ಆಂಡ್ರ್ಯೂ ಬಲ್ಬಿರ್ನಿ ಹಾಗೂ ಪೌಲ್ ಸ್ಟರ್ಲಿಂಗ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.3 ಓವರ್‌ಗಳಲ್ಲಿ 73 ರನ್‌ಗಳ ಜತೆಯಾಟವಾಡುವ ಮೂಲಕ ಐರ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಆಂಡ್ರ್ಯೂ ಬಲ್ಬಿರ್ನಿ ಕೇವಲ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 37 ರನ್ ಬಾರಿಸಿ ಅಕೆಲ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಪೌಲ್ ಸ್ಟರ್ಲಿಂಗ್ ಹಾಗೂ ಲೋರ್ಕಾನ್ ಟಕ್ಕರ್ ಮುರಿಯದ 77 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಪೌಲ್ ಸ್ಟರ್ಲಿಂಗ್ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 66 ರನ್ ಬಾರಿಸಿದರೆ, ಟಕ್ಕರ್ ಕೇವಲ 35 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ ಅಜೇಯ 45 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು