ವೆಸ್ಟ್ ಇಂಡೀಸ್ ಮಣಿಸಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟ ಐರ್ಲೆಂಡ್‌2 ಬಾರಿಯ ಚಾಂಪಿಯನ್ ವಿಂಡೀಸ್ ಎದುರು ಐರ್ಲೆಂಡ್‌ಗೆ 9 ವಿಕೆಟ್‌ಗಳ ಜಯಅಜೇಯ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಪೌಲ್ ಸ್ಟರ್ಲಿಂಗ್

ಹೋಬರ್ಟ್‌(ಅ.21): ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ಆರಂಭಿಕ ಬ್ಯಾಟರ್ ಪೌಲ್ ಸ್ಟರ್ಲಿಂಗ್(66*) ಅಜೇಯ ಅರ್ಧಶತಕದ ನೆರವಿನಿಂದ ವೆಸ್ಟ್‌ ಇಂಡೀಸ್ ವಿರುದ್ದ ಐರ್ಲೆಂಡ್ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್‌ ವೆಸ್ಟ್ ಇಂಡೀಸ್‌ ತಂಡವು ಅರ್ಹತಾ ಸುತ್ತಿನಲ್ಲೇ ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿ, ಟೂರ್ನಿಯಿಂದ ಹೊರಬಿದ್ದಿದೆ. ವೆಸ್ಟ್ ಇಂಡೀಸ್ ನೀಡಿದ್ದ 147 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿದೆ. 

ಇಲ್ಲಿನ ಬೆಲ್ಲಿರಿವೆ ಓವಲ್‌ ಮೈದಾನದಲ್ಲಿ ನಡೆದ 'ಬಿ' ಗುಂಪಿನ ಅರ್ಹತಾ ಸುತ್ತಿನ ಪಂದ್ಯವು, ಸೂಪರ್ 12 ಹಂತ ಪ್ರವೇಶಿಸುವ ದೃಷ್ಟಿಯಲ್ಲಿ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೈಲ್ ಮೇಯರ್ಸ್‌ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಚಾರ್ಲ್ಸ್‌ ಬ್ಯಾಟಿಂಗ್ 24 ರನ್‌ಗಳಿಗೆ ಸೀಮಿತವಾಯಿತು. ಮತ್ತೊಮ್ಮೆ ಮಂದಗತಿಯ ಬ್ಯಾಟಿಂಗ್ ನಡೆಸಿದ ಎವಿನ್ ಲೆವಿಸ್ 18 ಎಸೆತಗಳನ್ನು ಎದುರಿಸಿ ಒಂದೂ ಬೌಂಡರಿ ಬಾರಿಸದೆ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದ್ದ ನಾಯಕ ನಿಕೋಲಸ್ ಪೂರನ್ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರೋಮನ್ ಪೋವೆಲ್ ಬ್ಯಾಟಿಂಗ್ ಕೇವಲ 6 ರನ್‌ಗಳಿಗೆ ಸೀಮಿತವಾಯಿತು. 

Scroll to load tweet…

ಬ್ರೆಂಡನ್ ಕಿಂಗ್ ಏಕಾಂಗಿ ಹೋರಾಟ: ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದೆಡೆ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ಬ್ರೆಂಡನ್ ಕಿಂಗ್, ವಿಂಡೀಸ್ ತಂಡವು ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಬ್ರೆಂಡನ್ ಕಿಂಗ್ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 62 ರನ್‌ ಬಾರಿಸಿದರು. ಇನ್ನು ಕೊನೆಯಲ್ಲಿ ಒಡೆನ್ ಸ್ಮಿತ್ 12 ಎಸೆತಗಳಲ್ಲಿ 1 ಬೌಂಅರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 19 ರನ್‌ ಬಾರಿಸಿ ಅಜೇಯರಾಗುಳಿದರು. 

T20 World Cup: ನೆದರ್‌ಲ್ಯಾಂಡ್ ಮಣಿಸಿ ಸೂಪರ್‌ 12 ಹಂತಕ್ಕೆ ಲಗ್ಗೆಯಿಟ್ಟ ಶ್ರೀಲಂಕಾ..!

ಇನ್ನು ವೆಸ್ಟ್ ಇಂಡೀಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ನಾಯಕ ಆಂಡ್ರ್ಯೂ ಬಲ್ಬಿರ್ನಿ ಹಾಗೂ ಪೌಲ್ ಸ್ಟರ್ಲಿಂಗ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.3 ಓವರ್‌ಗಳಲ್ಲಿ 73 ರನ್‌ಗಳ ಜತೆಯಾಟವಾಡುವ ಮೂಲಕ ಐರ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಆಂಡ್ರ್ಯೂ ಬಲ್ಬಿರ್ನಿ ಕೇವಲ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 37 ರನ್ ಬಾರಿಸಿ ಅಕೆಲ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಪೌಲ್‌ ಸ್ಟರ್ಲಿಂಗ್ ಹಾಗೂ ಲೋರ್ಕಾನ್ ಟಕ್ಕರ್ ಮುರಿಯದ 77 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಪೌಲ್ ಸ್ಟರ್ಲಿಂಗ್ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 66 ರನ್ ಬಾರಿಸಿದರೆ, ಟಕ್ಕರ್ ಕೇವಲ 35 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ ಅಜೇಯ 45 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು.