1983ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಕ್ರಿಕೆಟಿಗ ಯಶ್‌ಪಾಲ್ ಶರ್ಮಾ ನಿಧನ
* ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯಶ್‌ಪಾಲ್ ಸಿಂಗ್ ಇನ್ನಿಲ್ಲ
* ಹೃದಯಾಘಾತದಿಂದ ಕೊನೆಯುಸಿರೆಳೆದ ಯಶ್‌ಪಾಲ್ ಶರ್ಮಾ
* 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಯಶ್‌ಪಾಲ್
ನವದೆಹಲಿ(ಜು.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶ್‌ಪಾಲ್ ಶರ್ಮಾ(66 ವರ್ಷ) ಹೃದಯಾಘಾತದಿಂದ ಮಂಗಳವಾರ(ಜು.13) ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಪತ್ರಕರ್ತ ರಜತ್ ಶರ್ಮಾ ಈ ಕುರಿತಂತೆ ಟ್ವೀಟ್ ಮಾಡಿದ್ದು, ಭಾರತದ ಮಾಜಿ ಕ್ರಿಕೆಟಿಗ ಯಶ್‌ಪಾಲ್ ಶರ್ಮಾ ದಿಢೀರ್ ಎನ್ನುವಂತೆ ಹೃದಯಾಘಾತದಿಂದ ಕೊನೆಯುಸಿರೆಳೆದ ಸುದ್ದಿ ಕೇಳಿ ದಿಗ್ಬ್ರಾಂತನಾದೆ. 1983ರಲ್ಲಿ ಮೊದಲ ಬಾರಿಗೆ ಭಾರತ ವಿಶ್ವಕಪ್ ಗೆದ್ದ ಸದಸ್ಯರಲ್ಲಿ ಯಶ್‌ಪಾಲ್ ಸಿಂಗ್ ಕೂಡಾ ಒಬ್ಬರಾಗಿದ್ದರು. ಹಲವಾರು ವರ್ಷಗಳಿಂದಲೂ ಅವರು ಇಂಡಿಯಾ ಟಿವಿ ಜತೆ ಕ್ರೀಡಾ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ನಿಧನದಿಂದ ಕ್ರಿಕೆಟ್ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರಿಗೆ ವಿನಮ್ರಪೂರ್ವಕ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಮೂಲದ ಕ್ರಿಕೆಟಿಗ ಯಶ್‌ಪಾಲ್ ಶರ್ಮಾ 70 ಹಾಗೂ 80ರ ದಶಕದಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು. ಯಶ್‌ಪಾಲ್ ಶರ್ಮಾ 1979ರಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾ ಪರ ಯಶ್‌ಪಾಲ್ ಶರ್ಮಾ 37 ಟೆಸ್ಟ್ ಹಾಗೂ 42 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 1,606 ಹಾಗೂ 883 ರನ್ ಬಾರಿಸಿದ್ದರು. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 160 ಪಂದ್ಯಗಳನ್ನಾಡಿ 21 ಶತಕ ಹಾಗೂ 46 ಅರ್ಧಶತಕ ಸಹಿತ 8,993 ರನ್ ಬಾರಿಸಿದ್ದರು.
1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಪಂದ್ಯದಲ್ಲಿ ಯಶ್‌ಪಾಲ್ ಶರ್ಮಾ 61 ರನ್ ಚಚ್ಚಿದ್ದರು. ಇನ್ನು ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ 61 ರನ್ ಬಾರಿಸುವ ಮೂಲಕ ಭಾರತ ತಂಡವು ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದ್ದರು.
ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಅವರು ಯಶ್‌ಪಾಲ್ ಶರ್ಮಾ ಅವರ ಬ್ಯಾಟಿಂಗ್ ಕಂಡು ಮಾರು ಹೋಗಿದ್ದರು. ಇದಷ್ಟೇ ಅಲ್ಲದೇ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ನೀವು ತುಂಬಾ ಚೆನ್ನಾಗಿ ಆಡುತ್ತೀರ. ನಿಮ್ಮ ಬ್ಯಾಟಿಂಗ್ ಪ್ರದರ್ಶನದ ಕುರಿತಂತೆ ನಾನು ಬಿಸಿಸಿಐ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಇದಾದ ಕೆಲವೇ ದಿನಗಳ ಬಳಿಕ ಯಶ್‌ಪಾಲ್ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು.
ಯಶ್‌ಪಾಲ್ ಶರ್ಮಾ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಸೇರಿದಂತೆ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮೂಲಕ ನುಡಿನಮನ ಸಲ್ಲಿಸಿದ್ದಾರೆ.