ಐಪಿಎಲ್ 2026ರ ಸಂಚಲನ ವೈಭವ್ ಸೂರ್ಯವಂಶಿ, ತನ್ನ ಸ್ಫೋಟಕ ಬ್ಯಾಟಿಂಗ್‌ನ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಪಂದ್ಯದ ಒತ್ತಡವನ್ನು ನಿವಾರಿಸಲು ಅವರು 'ಟಾಮ್ ಅಂಡ್ ಜೆರ್ರಿ'ಯಂತಹ ಕಾರ್ಟೂನ್‌ಗಳನ್ನು ನೋಡುತ್ತಾರೆ, ಇದು ಮೈದಾನದಲ್ಲಿ ನಿರ್ಭಯವಾಗಿ ಆಡಲು ಸಹಾಯ ಮಾಡುತ್ತದೆ.
ಬೆಂಗಳೂರು: IPL 2026ರ ಹೊಸ ಸಂಚಲನ ವೈಭವ್ ಸೂರ್ಯವಂಶಿ ತನ್ನ ಬಿರುಗಾಳಿಯ ಬ್ಯಾಟಿಂಗ್‌ನಿಂದ ಸದ್ದು ಮಾಡುತ್ತಿದ್ದಾರೆ. ಆದರೆ, ಮೈದಾನದಲ್ಲಿ ಅವರ ಈ ಸ್ಫೋಟಕ ಆಟದ ಹಿಂದಿರುವ ಒಂದು ಇಂಟ್ರೆಸ್ಟಿಂಗ್ ರಹಸ್ಯವನ್ನು ಅವರು ಇದೀಗ ಬಹಿರಂಗಪಡಿಸಿದ್ದಾರೆ. ಪಂದ್ಯಕ್ಕೂ ಮುನ್ನ ವೈಭವ್ ಏನು ಮಾಡುತ್ತಾರೆ ಗೊತ್ತಾ?
ಐಪಿಎಲ್ 2026ರಲ್ಲಿ ಕೇವಲ 15 ವರ್ಷದ ಹುಡುಗನೊಬ್ಬ ಇಡೀ ಕ್ರಿಕೆಟ್ ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡುತ್ತಿದ್ದಾನೆ. ಆತನೇ ವೈಭವ್ ಸೂರ್ಯವಂಶಿ. ಕ್ರೀಸ್‌ಗೆ ಬಂದರೆ ಬೌಲರ್ ಯಾರೇ ಇರಲಿ, ಫೋರ್, ಸಿಕ್ಸರ್‌ಗಳ ಸುರಿಮಳೆಗೈಯುವ ಈ ಯುವ ಆಟಗಾರ, ತನ್ನ ಸ್ಫೋಟಕ ಬ್ಯಾಟಿಂಗ್ ಹಿಂದಿನ ವಿಚಿತ್ರ ರಹಸ್ಯವನ್ನು ಇದೀಗ ಬಹಿರಂಗಪಡಿಸಿದ್ದಾನೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ನಂತರ ವೈಭವ್ ಆಡಿದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವೈಭವ್ ಸೂರ್ಯವಂಶಿ ಬಗ್ಗೆ ಈಗ ವಿಶೇಷ ಪರಿಚಯದ ಅಗತ್ಯವಿಲ್ಲ. ಕೇವಲ 15ನೇ ವಯಸ್ಸಿಗೆ ಐಪಿಎಲ್‌ನಂತಹ ದೊಡ್ಡ ಟೂರ್ನಿಯಲ್ಲಿ ನಿರ್ಭಯವಾಗಿ ಬ್ಯಾಟಿಂಗ್ ಮಾಡಿ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾನೆ. ಮೈದಾನಕ್ಕೆ ಕಾಲಿಟ್ಟ ಮೊದಲ ಎಸೆತದಿಂದಲೇ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಬ್ಬರಿಸುವುದು ವೈಭವ್ ಶೈಲಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಬೌಲರ್‌ಗಳನ್ನು ಎದುರಿಸುವಾಗ ಒತ್ತಡ ಇರುವುದಿಲ್ಲವೇ? ಎಂಬ ಪ್ರಶ್ನೆಗೆ ವೈಭವ್ ನೀಡಿದ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಸ್ಪೋಟಕ ಬ್ಯಾಟಿಂಗ್ ಗುಟ್ಟು ಬಿಚ್ಚಿಟ್ಟ ವೈಭವ್
ಮೈದಾನದಲ್ಲಿ ಬೌಲರ್‌ಗಳ ಬೆವರಿಳಿಸುವ ಮುನ್ನ, ಈ ಯುವ ಆಟಗಾರ ಮೊಬೈಲ್‌ನಲ್ಲಿ ಏನು ನೋಡುತ್ತಾನೆಂದು ತಿಳಿದರೆ ನಿಮಗೆ ನಗಬೇಕೋ, ಅಚ್ಚರಿಪಡಬೇಕೋ ತಿಳಿಯದು. ಸಾಮಾನ್ಯವಾಗಿ ಆಟಗಾರರು ಪಂದ್ಯಕ್ಕೂ ಮುನ್ನ ಎದುರಾಳಿ ಬೌಲರ್‌ಗಳ ವಿಡಿಯೋ ಅಥವಾ ತಮ್ಮ ಹಳೆಯ ಇನ್ನಿಂಗ್ಸ್‌ಗಳನ್ನು ನೋಡುತ್ತಾರೆ. ಆದರೆ ವೈಭವ್ ಮಾತ್ರ 'ಟಾಮ್ ಅಂಡ್ ಜೆರ್ರಿ' ಅಥವಾ 'ಡೊರೇಮಾನ್' ನಂತಹ ಕಾರ್ಟೂನ್‌ಗಳನ್ನು ನೋಡುತ್ತಾರಂತೆ. ಲಖನೌ ವಿರುದ್ಧದ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ವೈಭವ್, ಈ ವಿಷಯವನ್ನು ತಮಾಷೆಯಾಗಿ ಹಂಚಿಕೊಂಡರು. 'ನನ್ನ ತಲೆಯಲ್ಲಿ ಬೇರೆ ಯಾವುದೇ ಯೋಚನೆಗಳು ಇರುವುದಿಲ್ಲ. ನನಗೆ ಈಗಲೂ ಕಾರ್ಟೂನ್ ನೋಡುವುದೆಂದರೆ ತುಂಬಾ ಇಷ್ಟ. ಪ್ರತಿ ಪಂದ್ಯಕ್ಕೂ ಮುನ್ನ ಕಾರ್ಟೂನ್ ನೋಡುವುದು ನನ್ನ ಅಭ್ಯಾಸ, ಅದು ಈಗಲೂ ಮುಂದುವರಿದಿದೆ' ಎಂದು ವೈಭವ್ ನಗುತ್ತಾ ಹೇಳಿದರು. ಇನ್ನು ಇದೇ ವೇಳೆ ತಂಡವನ್ನು ಗೆಲ್ಲಿಸುವುದೇ ತನ್ನ ಮುಖ್ಯ ಗುರಿ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ಐಪಿಎಲ್ ವಿಶ್ವದ ಅತ್ಯಂತ ಒತ್ತಡದ ಲೀಗ್‌ಗಳಲ್ಲಿ ಒಂದು. ಇಲ್ಲಿ 15ನೇ ವಯಸ್ಸಿನಲ್ಲಿ ಆಡುವುದು ಸಾಮಾನ್ಯ ಮಾತಲ್ಲ. ಆದರೆ, ಕಾರ್ಟೂನ್‌ಗಳನ್ನು ನೋಡುವುದರಿಂದ ತನ್ನ ಮೆದುಳು ಕ್ರಿಕೆಟ್ ಅನ್ನು ಒಂದು ಭಾರವೆಂದು ಪರಿಗಣಿಸದೆ, ಕೇವಲ ಒಂದು ಆಟವಾಗಿ ನೋಡುತ್ತದೆ ಎಂದು ವೈಭವ್ ಹೇಳಿದ್ದಾರೆ. ಇದರಿಂದ ತಾನು ಒತ್ತಡಕ್ಕೆ ಒಳಗಾಗುವುದಿಲ್ಲವಂತೆ. ಹೀಗೆ ಮಾಡುವುದರಿಂದ ಮೈದಾನದಲ್ಲಿ ತುಂಬಾ ಶಾಂತವಾಗಿ ಮತ್ತು ರಿಲ್ಯಾಕ್ಸ್ ಆಗಿ ಇರಲು ಸಾಧ್ಯವಾಗುತ್ತದೆ. ಇದರಿಂದ ಅತಿ ವೇಗದ ಬೌಲರ್‌ಗಳನ್ನೂ ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತನ್ನ ಕಾರ್ಟೂನ್ ಪ್ರೀತಿಯನ್ನು ಬಹಿರಂಗಪಡಿಸಿದ ವೈಭವ್, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಿಂಚಲು ವಿಫಲರಾದರು. ಈ ಪಂದ್ಯದಲ್ಲಿ 11 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರು. ಲಖನೌ ಸೂಪರ್ ಜೈಂಟ್ಸ್‌ನ ಎಡಗೈ ವೇಗಿ ಮೊಹ್ಸಿನ್ ಖಾನ್, ವೈಭವ್ ವಿಕೆಟ್ ಪಡೆದರು. ವಿಶೇಷವೆಂದರೆ, ಐಪಿಎಲ್ ಇತಿಹಾಸದಲ್ಲಿ ವೈಭವ್ ಸೂರ್ಯವಂಶಿಗೆ 'ಮೇಡನ್ ಓವರ್' ಮಾಡಿ, ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹ್ಸಿನ್ ಖಾನ್ ಪಾತ್ರರಾದರು.
ಅದ್ಭುತ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿ
ಈ ಋತುವಿನಲ್ಲಿ ವೈಭವ್ ಸೂರ್ಯವಂಶಿ ಅವರ ಪ್ರದರ್ಶನ ಅದ್ಭುತವಾಗಿದೆ. ಇಲ್ಲಿಯವರೆಗೆ ಆಡಿದ 7 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 254 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿರುವುದಲ್ಲದೆ, ಸದ್ಯ ಆರೆಂಜ್ ಕ್ಯಾಪ್ ರೇಸ್‌ನಲ್ಲೂ ವೈಭವ್ ಮುಂದುವರಿದಿದ್ದಾರೆ. ತನ್ನದೇ ಶೈಲಿಯ ಬ್ಯಾಟಿಂಗ್‌ನಿಂದ ರಂಜಿಸುತ್ತಿರುವ ಈ 'ಕಾರ್ಟೂನ್ ಲವರ್' ಮುಂಬರುವ ಪಂದ್ಯಗಳಲ್ಲಿ ಇನ್ನಷ್ಟು ಸಂಚಲನ ಸೃಷ್ಟಿಸುತ್ತಾರಾ ಕಾದು ನೋಡಬೇಕು.


