ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ 15 ವರ್ಷದ ವೈಭವ್‌ ಸೂರ್ಯವಂಶಿಯನ್ನು ಐರ್ಲೆಂಡ್‌ ಪ್ರವಾಸಕ್ಕೆ ಬಿಸಿಸಿಐ ಪರಿಗಣಿಸುತ್ತಿದೆ. ಒಂದು ವೇಳೆ ಅವರು ಆಯ್ಕೆಯಾದರೆ, ಸಚಿನ್‌ ತೆಂಡುಲ್ಕರ್ ಮತ್ತು ಶಫಾಲಿ ವರ್ಮಾ ಅವರ ದಾಖಲೆ ಮುರಿದು ಭಾರತ ತಂಡಕ್ಕೆ ಆಡಿದ ಅತಿಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಅಬ್ಬರದ ಆಟವಾಡುತ್ತಿರುವ 15 ವರ್ಷದ ವೈಭವ್‌ ಸೂರ್ಯವಂಶಿಯನ್ನು ಐರ್ಲೆಂಡ್‌ ಪ್ರವಾಸಕ್ಕೆ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆಯ್ಕೆ ಸಮಿತಿಯು ವೈಭವ್‌ರ ಹೆಸರನ್ನು 35 ಮಂದಿಯ ಶಾರ್ಟ್‌ಲಿಸ್ಟ್‌ಗೆ ಸೇರಿಸಿದ್ದು, ಪ್ರವಾಸ ಕೈಗೊಳ್ಳುವ 15 ಮಂದಿಯ ತಂಡದಲ್ಲಿ ಸ್ಥಾನ ನೀಡುವ ನಿರೀಕ್ಷೆಯಿದೆ. ಹೀಗಾದರೆ ಅವರು ಭಾರತ ತಂಡಕ್ಕೆ ಆಯ್ಕೆಯಾದ ಅತಿಕಿರಿಯ ಆಟಗಾರ ಎನ್ನುವ ಖ್ಯಾತಿ ಗಳಿಸಲಿದ್ದಾರೆ.

ವೈಭವ್‌ ಸೂರ್ಯವಂಶಿ ಈಗಾಗಲೇ ಅಂಡರ್‌-19 ತಂಡದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಈ ಐಪಿಎಲ್‌ನಲ್ಲಿ ಬುಮ್ರಾ, ಹೇಜಲ್‌ವುಡ್‌ ಸೇರಿ ಪ್ರಮುಖ ಅಂತಾರಾಷ್ಟ್ರೀಯ ಬೌಲರ್‌ಗಳ ವಿರುದ್ಧ ವೈಭವ್‌ರ ಆಟ ಆಯ್ಕೆ ಸಮಿತಿಯ ಗಮನ ಸೆಳೆದಿದೆ. ಹೀಗಾಗಿ ಅವರ ಪ್ರತಿಭೆಗೆ ತಕ್ಕಂತೆ ಭಾರತ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ.

ಶಫಾಲಿ ವರ್ಮಾ, ಸಚಿನ್‌ ತೆಂಡೂಲ್ಕರ್ ಕಿರಿಯ ಕ್ರಿಕೆಟರ್ಸ್‌

ಭಾರತಕ್ಕೆ ಆಡಿದ ಅತಿ ಕಿರಿಯ ಪುರುಷ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌. 1989ರಲ್ಲಿ ಸಚಿನ್‌ಗೆ 16 ವರ್ಷ 205 ದಿನಗಳಾಗಿದ್ದಾಗ ಭಾರತ ತಂಡದ ಪರ ಆಡಿದ್ದರು. ಒಟ್ಟಾರೆ, ಶಫಾಲಿ ವರ್ಮಾ ಭಾರತ ಪ್ರತಿನಿಧಿಸಿದ ಅತಿ ಕಿರಿಯ ಕ್ರಿಕೆಟರ್‌. ಅವರು 15 ವರ್ಷ, 8 ತಿಂಗಳಾಗಿದ್ದಾಗಲೇ ಭಾರತಕ್ಕೆ ಆಡಿದ್ದರು. ವೈಭವ್‌ ಆಡಿದರೆ ಸಚಿನ್‌, ಶಫಾಲಿ ದಾಖಲೆ ಮುರಿಯಲಿದ್ದಾರೆ.

ಐರ್ಲೆಂಡ್‌, ಇಂಗ್ಲೆಂಡ್‌ ಪ್ರವಾಸ ಬಳಿಕ ಸೂರ್ಯಕುಮಾರ್ ಯಾದವ್ ಭವಿಷ್ಯ ನಿರ್ಧಾರ

ನವದೆಹಲಿ: ಇತ್ತೀಚೆಗೆ ಭಾರತಕ್ಕೆ ಸೂರ್ಯಕುಮಾರ್‌ ಯಾವದ್‌ ತಮ್ಮ ನಾಯಕತ್ವದಲ್ಲೇ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟಿರಬಹುದು. ಆದರೆ ಅವರ ಬ್ಯಾಟಿಂಗ್‌ ಫಾರ್ಮ್‌ ನೋಡಿದರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಹಾಗೂ ಟಿ20 ವಿಶ್ವಕಪ್‌ವರೆಗೂ ತಂಡದಲ್ಲಿ ಉಳಿಯಲಿದ್ದಾರೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಜೂನ್-ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಸರಣಿಯು ನಾಯಕ ಸೂರ್ಯಕುಮಾರ್‌ಗೆ ನಿರ್ಣಾಯಕವಾಗಿರಲಿದೆ. ಏಕೆಂದರೆ ನಾಯಕತ್ವಕ್ಕಿಂತ ಹೆಚ್ಚಾಗಿ ಅವರ ಬ್ಯಾಟಿಂಗ್ ಪರಿಶೀಲನೆಗೆ ಒಳಪಡಲಿದೆ. ಈ 2 ಸರಣಿಗಳಲ್ಲಿ ಅವರು ನೀಡುವ ಪ್ರದರ್ಶನದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಕಳಪೆ ಪ್ರದರ್ಶನ ನೀಡಿದರೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ನಿವೃತ್ತಿಗೂ ಸೂಚಿಸಬಹುದು ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ಗೆ ಸೆಪ್ಟೆಂಬರ್‌ನಲ್ಲಿ 36 ವರ್ಷ ತುಂಬುತ್ತದೆ. ಒಲಿಂಪಿಕ್ಸ್‌, 2028ರ ವಿಶ್ವಕಪ್‌ ವೇಳೆಗೆ ಅವರ ವಯಸ್ಸು 38 ಆಗಲಿದೆ. ಹೀಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿದ್ದರೆ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದೇ ಪ್ರಮುಖ ಮಾನದಂಡವಾಗಿರಲಿದೆ.