ನವದೆಹಲಿ(ಫೆ.12): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ 2021ರ ಐಪಿಎಲ್ ಹರಾಜಿನಲ್ಲಿ ಕರ್ನಾಟಕದ 14 ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಕರುಣ್‌ ನಾಯರ್‌, ಅಭಿಮನ್ಯು ಮಿಥುನ್‌, ಕೃಷ್ಣಪ್ಪ ಗೌತಮ್‌, ಜೆ. ಸುಚಿತ್, ರೋನಿತ್ ಮೋರೆ ಸೇರಿದಂತೆ ರಾಜ್ಯ ತಂಡದ ಪ್ರಮುಖ 14 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಒಟ್ಟು 292 ಆಟಗಾರರ ಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ.

ಈ ಬಾರಿಯ ಹರಾಜಿಗೆ 1114 ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ 8 ಫ್ರಾಂಚೈಸಿಗಳು ಒಟ್ಟು 292 ಆಟಗಾರರನ್ನು ಅಂತಿಮವಾಗಿ ಹರಾಜಿಗೆ ಹೆಸರನ್ನು ಫೈನಲ್ ಮಾಡಿವೆ. 8 ವರ್ಷಗಳ ನಿಷೇಧದ ಬಳಿಕ ಐಪಿಎಲ್‌ ಆಡುವ ಕನಸು ಕಾಣುತ್ತಿದ್ದ ಟೀಂ ಇಂಡಿಯಾ ವೇಗಿ ಶ್ರೀಶಾಂತ್‌ಗೆ ನಿರಾಸೆಯಾಗಿದ್ದು, ಅಂತಿಮ 292 ಆಟಗಾರರ ಪಟ್ಟಿಯಲ್ಲಿ ಕೇರಳ ವೇಗಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 

ಐಪಿಎಲ್ ಹರಾಜು 2021: ಅರ್ಜುನ್‌ ತೆಂಡುಲ್ಕರ್ ಮೂಲಬೆಲೆ ಕೇವಲ 20 ಲಕ್ಷ ರುಪಾಯಿ..!

ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ ಕೂಡಾ ಈ ಬಾರಿಯ ಐಪಿಎಲ್‌ ಆಟಗಾರರ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2014ರ ಬಳಿಕ ಐಪಿಎಲ್‌ ಆಡದ ಪೂಜಾರ ಮೂಲ ಬೆಲೆ 50 ಲಕ್ಷ ರುಪಾಯಿ ನಿಗದಿಪಡಿಸಲಾಗಿದೆ. ಈ ಹಿಂದೆ ಪೂಜಾರ ಕಿಂಗ್ಸ್‌ ಇಲೆವನ್‌ ಪಂಜಾಬ್‌, ಕೋಲ್ಕತ ನೈಟ್‌ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.