Asianet Suvarna News Asianet Suvarna News

Covid-19: ಕೋವಿಶೀಲ್ಡ್ ಲಸಿಕೆಯಿಂದ ಪುರುಷತ್ವಕ್ಕೆ ಹಾನಿ ಇದೆಯಾ?

ಮಣಿಪಾಲದ ಮಾಹ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯಿಂದ, ವ್ಯಾಕ್ಸಿನ್ ತೆಗೆದುಕೊಂಡವರು ನಿರಾಳವಾಗಬಹುದು.

Is the Covishield Vaccine Harmful to Virility grg
Author
First Published Sep 16, 2022, 8:23 AM IST

ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ(ಸೆ.16):  ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದಾಗ, ಅನೇಕ ಸವಾಲುಗಳು ಎದುರಾಗಿದ್ದವು. ವ್ಯಾಕ್ಸಿನ್ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಅನ್ನುವ ಭೀತಿ ಯೋಜನೆಯ ಹಿನ್ನಡೆಗೆ ಒಂದು ಕಾರಣವಾಗಿತ್ತು. ಇದೀಗ ಮಹತ್ವದ ಸಂಶೋಧನೆ ಎಂದು ಹೊರ ಬಿದ್ದಿದೆ, ಮಣಿಪಾಲದ ಮಾಹ ವಿಶ್ವವಿದ್ಯಾಲಯ ಕೈಗೊಂಡ ಈ ಸಂಶೋಧನೆಯಿಂದ, ವ್ಯಾಕ್ಸಿನ್ ತೆಗೆದುಕೊಂಡವರು ನಿರಾಳವಾಗಬಹುದು. ಕೋವಿಡ್ ವಿರುದ್ಧ ಹೋರಾಡಲು ತೆಗೆದುಕೊಳ್ಳುವ ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆ ಯಾಗುವುದಿಲ್ಲ ಎಂಬುದು ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡವೊಂದು ಈ ಕುರಿತು ಮೊದಲ ಬಾರಿ ನಡೆಸಿದ ಪೈಲಟ್ ಅಧ್ಯಯನದಲ್ಲಿ ಕಂಡುಕೊಂಡಿದೆ.

ಈ ಕುರಿತ ಸಂಶೋಧನಾ ವರದಿ ಇಂಗ್ಲೆಂಡ್ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಆ್ಯಂಡ್ ಫರ್ಟಿಲಿಟಿಯ ಅಧಿಕೃತ ಜರ್ನಲ್‌ನ ಸೆ.5ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ನೀಡಿದ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. 

ಕರ್ನಾಟಕದಲ್ಲಿ 379 ಕೋವಿಡ್‌ ಕೇಸ್‌: 3 ತಿಂಗಳಲ್ಲೇ ಕನಿಷ್ಠ

ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಂಡ ಪುರುಷನ ವೀರ್ಯದ ಗುಣಮಟ್ಟದಲ್ಲಿ, ಸಂಖ್ಯೆ, ಚಲನೆಯ ಗುಣ, ಲೈಂಗಿಕತೆ ಯಾವುದೂ ಬದಲಾಗದಿರುವುದು ಸಂಶೋಧನೆ ವೇಳೆ ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾದ ಯಾವುದೂ ಕಂಡುಬಂದಿಲ್ಲ ಎಂದು ಪ್ರಕಟಣೆ ಹೇಳಿದೆ.ಸಂಶೋಧನೆಗಾಗಿ 53 ಮಂದಿಯ ವೀರ್ಯವನ್ನು ಪರೀಕ್ಷೆಗೆ ತೆಗೆದು ಕೊಳ್ಳಲಾಗಿದೆ. ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಳ್ಳುವ ಮೊದಲು ಅವರ ವೀರ್ಯವನ್ನು ಪರೀಕ್ಷೆಗಾಗಿ ತೆಗೆದುಕೊಂಡಿದ್ದರೆ, ವ್ಯಾಕ್ಸಿನೇಷನ್ ಆದ ಎರಡು ತಿಂಗಳ ನಂತರ ಮತ್ತೊಮ್ಮೆ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ. 

ಕೋವಿಡ್-19ಕ್ಕೆ ಪಾಸಿಟಿವ್ ಬಂದ ಅಥವಾ ಕೋವಿಡ್‌ನ ಗುಣಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಪರಿಗಣಿಸಲಿಲ್ಲ ಎಂದು ವರದಿ ತಿಳಿಸಿದೆ.ಅಧ್ಯಯನಕ್ಕಾಗಿ ಆಯ್ಕೆ ಮಾಡಿದ 53 ಮಂದಿಯೂ ಎರಡು ಡೋಸ್ ವ್ಯಾಕ್ಸಿನ್‌ನ್ನು ಸ್ವೀಕರಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿಯ ವೀರ್ಯದ ಗುಣಮಟ್ಟ ಡಬ್ಲ್ಯುಎಚ್‌ಓ ನಿಗದಿ ಪಡಿಸಿದ ಮಟ್ಟಕ್ಕಿಂತ ಕೆಳಗಿದ್ದರೂ, ವ್ಯಾಕ್ಸಿನ್ ಪಡೆದ ನಂತರವೂ ಅದರಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ವಿವರಿಸಲಾಗಿದೆ.

ಈ ಸಂಶೋಧನೆಯಿಂದ ಭಾರತದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೋವಿಡ್ ವ್ಯಾಕ್ಸಿನ್‌ಗಳ ಸುರಕ್ಷತೆಯ ಬಗ್ಗೆ ಭರವಸೆ ಮೂಡಿದಂತಾಗಿದೆ. ಸಂಶೋಧನೆಯಿಂದ ವ್ಯಾಕ್ಸಿನೇಷನ್ ಬಗ್ಗೆ ಇದ್ದ ಹಲವು ಊಹಾಪೋಹ, ಆತಂಕಗಳು ದೂರವಾಗುವಂತಾಗಿದೆ.ಮಣಿಪಾಲದ ಡಾ.(ಪ್ರೊ.) ಸತೀಶ್ ಅಡಿಗ ನೇತೃತ್ವದ ಐವರು ತಜ್ಞರ ತಂಡ ಈ ಅಧ್ಯಯನವನ್ನು ನಡೆಸಿದೆ.
 

Follow Us:
Download App:
  • android
  • ios