ತಾಂತ್ರಿಕ ಸಮಿತಿಗಳ ಸಲಹೆಗಳನ್ನು ಪಾಲನೆ ಮಾಡಬೇಕು. ಕೋವಿಡ್‌ ಸೋಂಕು ಹರಡದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜನರಿಗೆ ಅರಿವು ಮೂಡಿಸುವುದರ ಜತೆಗೆ ಮಾಸ್ಕ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು ಎಂಬುದರ ಬಗ್ಗೆ ಚರ್ಚೆ 

ಸುವರ್ಣ ವಿಧಾನಸೌಧ(ಡಿ.27): ಚೀನಾ ದೇಶದಲ್ಲಿ ಕೋವಿಡ್‌ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಮುನ್ನಚ್ಚರಿಕೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರವು, ಸಚಿವ ಸಂಪುಟ ಸಭೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತು ಚರ್ಚೆ ನಡೆಸಿತು. ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್‌ ನಿಯಮಗಳನ್ನು ಕುರಿತು ಸಮಾಲೋಚನೆ ನಡೆಸಲಾಯಿತು. ತಾಂತ್ರಿಕ ಸಮಿತಿ ಸಲಹೆಗಳಂತೆ ಕೋವಿಡ್‌ ನಿಯಮಗಳನ್ನು ಮುಂದುವರಿಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರ್ಗಸೂಚಿ ರಚನೆ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಂತ್ರಿಕ ಸಮಿತಿಗಳ ಸಲಹೆಗಳನ್ನು ಪಾಲನೆ ಮಾಡಬೇಕು. ಕೋವಿಡ್‌ ಸೋಂಕು ಹರಡದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜನರಿಗೆ ಅರಿವು ಮೂಡಿಸುವುದರ ಜತೆಗೆ ಮಾಸ್ಕ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಲಾಗಿದೆ.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೋವಿಡ್‌ ನಿಯಂತ್ರಣದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದು, ಬೂಸ್ಟರ್‌ ಡೋಸ್‌ ಹೆಚ್ಚಿಸುವುದು, ಐಎಲ್‌ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು, ಮಾಸ್ಕ್‌ ಧಾರಣೆ ಕಡ್ಡಾಯಗಳ ಬಗ್ಗೆ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ ಹಂತ ಹಂತವಾಗಿ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಆತಂಕ ಬೇಡ, ಮುಂಜಾಗ್ರತೆ ಅಗತ್ಯ: ಸುಧಾಕರ್‌

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕೋವಿಡ್‌ ವ್ಯಾಕ್ಸಿನೇಷನ್‌ ನೀಡಿಕೆ ಪ್ರಮಾಣ ತುಂಬಾ ಉತ್ತಮವಾಗಿ ಆಗಿದೆ. ಜತೆಗೆ ನಮ್ಮ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ. ಹಾಗಾಗಿ ಕೋವಿಡ್‌ ಬಂದರೆ ಯಾರೂ ಆತಂಕಪಡಬೇಕಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಪರಿಣಾಮದ ವಿಚಾರದಲ್ಲಿ ನಾವು ಚೀನಾಗೆ ಹೋಲಿಕೆ ಮಾಡುವುದು ಬೇಡ. ಈಗಾಗಲೇ ನಮ್ಮ ದೇಶದಲ್ಲಿ ವ್ಯಾಕ್ಸಿನೇಷನ್‌ ಉತ್ತಮ ರೀತಿಯಲ್ಲಿ ಆಗಿರುವುದರಿಂದ ಹಾಗೂ ಲಾಕ್‌ಡೌನ್‌ ತೆರವುಗೊಳಿಸಿ ಸಮುದಾಯದಲ್ಲಿ ಸಂಪೂರ್ಣ ಕೋವಿಡ್‌ ಹರಡಿಹೋಗಿರುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿದೆ. ನಾವು ಈಗ ಕೋವಿಡ್‌ ನಿಯಂತ್ರಣ ವಿಷಯದಲ್ಲೂ ಇತರೆ ದೇಶಗಳಿಗಿಂತ ಎರಡುಪಟ್ಟು ಹೆಚ್ಚು ಉತ್ತಮ ಶಕ್ತಿ, ಸೌಲಭ್ಯಗಳನ್ನು ಹೊಂದಿದ್ದೇವೆ ಎಂದರು.

2-3 ತಿಂಗಳಲ್ಲಿ ಕರ್ನಾಟಕಕ್ಕೂ ಬಿಎಫ್‌7 ದಾಳಿ ಸಂಭವ: ಸಚಿವ ಸುಧಾಕರ್‌

‘ಹಾಗಾಗಿ ಸೋಂಕು ದೃಢಪಟ್ಟರೆ ಯಾರೂ ಗಾಬರಿಗೊಳ್ಳಬೇಕಿಲ್ಲ. ಸಾಮಾನ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಾಕು. ಜನ ಜಂಗುಳಿ ಇರುವೆಡೆ ಮಾಸ್ಕ್‌ ಧರಿಸುವುದು ಒಳ್ಳೆಯದು. ಇನ್ನು ಆಸ್ಪತ್ರೆ ವ್ಯವಸ್ಥೆ ಹೇಗಿರಬೇಕೆಂದು ತಜ್ಞರ ಸಲಹೆ ಪಡೆದು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮಾರ್ಗಸೂಚಿ ರೂಪಿಸಲಾಗುವುದು’ ಎಂದು ತಿಳಿಸಿದರು.

ಕೋವಿಡ್‌ ತೀವ್ರವಾಗಿ ಬಾಧಿಸುತ್ತಿರುವ ಚೀನಾದಿಂದ ಬಂದಿರುವ ವ್ಯಕ್ತಿಗೆ ಸೋಂಕು ದೃಢಪಟ್ಟಿರುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ವ್ಯಕ್ತಿಯ ಸೋಂಕಿಗೆ ಯಾವ ತಳಿ ಕಾರಣ ಎಂಬುದು ಇನ್ನೂ ಪತ್ತೆಯಾಗಿಲ್ಲ. ಜೀನೋಮಿಕ್‌ ಸೀಕ್ವೆನ್ಸ್‌ ವರದಿಗಾಗಿ ಕಾಯುತ್ತಿದ್ದೇವೆ ಎಂದರು.