Asianet Suvarna News Asianet Suvarna News

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ

ಆಸ್ಪತ್ರೆಗಳಲ್ಲಿನ ಹಾಸಿ, ಆಕ್ಸಿಜನ್‌ ಲಭ್ಯತೆ, ವ್ಯಾಕ್ಸಿನ್‌ ಬಗ್ಗೆ ಮಾಹಿತಿ ಸಂಗ್ರಹ, ನಾಳೆ ಸಂಜೆಯೊಳಗೆ ಸರ್ಕಾರಕ್ಕೆ ವರದಿ: ತುಷಾರ್‌ ಗಿರಿನಾಥ್‌

BBMP Prepared for the Treatment of Covid Patients in Bengaluru grg
Author
First Published Dec 27, 2022, 7:30 AM IST

ಬೆಂಗಳೂರು(ಡಿ.27): ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊರಾಂಗಣ ಮತ್ತು ಒಳಾಂಗಣದಲ್ಲಿ ಮಾಸ್ಕ್‌ ಕಡ್ಡಾಯ ಎಂದು ಸರ್ಕಾರದ ಮಾರ್ಗಸೂಚಿ ನೀಡಿದೆ. ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿನ ಹಾಸಿಗೆ, ಆಮ್ಲಜನಕ ಘಟಕ ವ್ಯವಸ್ಥೆ ಸಿದ್ಧಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯೊಂದಿಗೆ ಸೋಮವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಸ್ಪತ್ರೆಗಳಲ್ಲಿನ ಹಾಸಿಗೆ ವ್ಯವಸ್ಥೆ, ಆಮ್ಲಜನ ಘಟಕಗಳು, ವ್ಯಾಕ್ಸಿನ್‌ ಪ್ರಮಾಣಗಳ ಲೆಕ್ಕ ಹಾಕಲಾಗುತ್ತಿದೆ. ಅದರ ಪ್ರಕಾರ ನಗರದಲ್ಲಿ 30 ಹಾಸಿಗೆಗಿಂತ ಹೆಚ್ಚಿನ ಸಾಮರ್ಥ್ಯದ 419 ಆಸ್ಪತ್ರೆಗಳಿದ್ದು, ಅವುಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆಂದು ನಿಗದಿ ಮಾಡಬೇಕಾದ ಹಾಸಿಗೆಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಜತೆಗೆ, ಯಾವೆಲ್ಲ ಆಸ್ಪತ್ರೆಗಳಲ್ಲಿ ಮೆಡಿಕಲ್‌ ಆಕ್ಸಿಜನ್‌ ಘಟಕ ಲಭ್ಯವಿದೆ. ಆ ಘಟಕದಲ್ಲಿ ಆಮ್ಲಜನಕದ ಪ್ರಮಾಣ ಎಷ್ಟಿದೆ ಎಂಬುದನ್ನೂ ಲೆಕ್ಕ ಹಾಕಲಾಗುತ್ತಿದೆ. ಮಂಗಳವಾರ ಸಂಜೆಯೊಳಗೆ ಈ ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್‌ಗೆ ಮಿಶ್ರ ಪ್ರತಿಕ್ರಿಯೆ: ನಿಯಮವಿದ್ದೂ ಎಚೆತ್ತುಕೊಳ್ಳದ ಪ್ರಯಾಣಿಕರು

ಸೋಂಕು ಹರಡುವುದನ್ನು ತಡೆಯಲು ಜನರಿಗೆ 2ನೇ ಡೋಸ್‌ ಮತ್ತು ಬೂಸ್ಟರ್‌ ಡೋಸ್‌ ನೀಡುವ ಸಲುವಾಗಿ 1 ಲಕ್ಷ ಕೋವಿಶೀಲ್ಡ್‌, 40 ಸಾವಿರ ಕಾರ್ಬಿವ್ಯಾಕ್ಸ್‌ ಪೂರೈಕೆಗೆ ಬಿಬಿಎಂಪಿಯಿಂದ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರದಿಂದ ಮುಂಚೂಣಿ ಸಿಬ್ಬಂದಿ, ಅಧಿಕಾರಿ, ಆರೋಗ್ಯ ಸೇವೆಯಲ್ಲಿನ ಸಿಬ್ಬಂದಿ, ಅಧಿಕಾರಿ ಹಾಗೂ 60 ವರ್ಷ ಮೇಲ್ಪಟ್ಟಹಿರಿಯರಿಗೆ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಲಾಗಿದೆ. ಬೆಂಗಳೂರಿನಲ್ಲಿ 14 ಲಕ್ಷ ಜನರ ಪೈಕಿ ಈವರೆಗೆ 8.40 ಲಕ್ಷ ಜನರಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ. ಹೀಗೆ ಉಚಿತ ಬೂಸ್ಟರ್‌ ಡೋಸ್‌ ನೀಡಬೇಕಾದವರ ಲೆಕ್ಕವನ್ನೂ ಬಿಬಿಎಂಪಿಯಿಂದ ಆರೋಗ್ಯ ಇಲಾಖೆಗೆ ನೀಡಲಾಗಿದೆ ಎಂದು ವಿವರಿಸಿದರು.

ಹೊಸ ವರ್ಷ ಆಚರಣೆ ಬಗ್ಗೆ ಚರ್ಚೆ

ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಆಚರಣೆ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅಂತಿಮವಾಗಿ ಸರ್ಕಾರ ಹಾಗೂ ಕೋವಿಡ್‌ ತಾಂತ್ರಿಕಾ ಸಲಹಾ ಸಮಿತಿ ನೀಡುವ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು ಎಂದು ತುಷಾರ್‌ ಮಾಹಿತಿ ನೀಡಿದರು.

2-3 ತಿಂಗಳಲ್ಲಿ ಕರ್ನಾಟಕಕ್ಕೂ ಬಿಎಫ್‌7 ದಾಳಿ ಸಂಭವ: ಸಚಿವ ಸುಧಾಕರ್‌

ಚೀನಾದಿಂದ ಬಂದವ ನಗರಕ್ಕೆ ಪ್ರವೇಶಿಸಿಲ್ಲ

ಚೀನಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆ ವ್ಯಕ್ತಿಯು ವಿಮಾನ ನಿಲ್ದಾಣದಲ್ಲಿ ಬಂದಿದ್ದಾರೆ. ಆದರೆ, ನಗರದ ಒಳಗೆ ಬಂದಿಲ್ಲ. ವಿಮಾನ ನಿಲ್ದಾಣದಿಂದಲೇ ಪುನಃ ಆಗ್ರಾಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತುಷಾರ್‌ ಹೇಳಿದರು.

ವಿದೇಶಿ ಪ್ರಯಾಣಿಕರಿಗೆ ಬೌರಿಂಗ್‌ನಲ್ಲಿ ಬೆಡ್‌

ವಿದೇಶದಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ದೃಢಪಟ್ಟರೆ ನಗರ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿಯೂ ಬೌರಿಂಗ್‌ ಆಸ್ಪತ್ರೆಯಲ್ಲಿ ವಿದೇಶಿ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯೂ ಅಲ್ಲಿಯೇ ವ್ಯವಸ್ಥೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ಒಟ್ಟು 60 ಬೆಡ್‌ಗಳಿರುವ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಹತ್ತು ಐಸಿಯು ಬೆಡ್‌, ರೋಗ ಲಕ್ಷಣ ಇರುವ ಸೋಂಕಿತರಿಗೆ 8 ಆರೆಂಜ್‌ ಬೆಡ್‌ ಹಾಗೂ 42 ಸಾಮಾನ್ಯ ಬೆಡ್‌ ವ್ಯವಸ್ಥೆ ಮಾಡಲಾಗಿದೆ.

Follow Us:
Download App:
  • android
  • ios