ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಮಾಸ್ಕ್‌ (ಮುಖಗವಸು) ಕಡ್ಡಾಯ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಪ್ರಯಾಣಿಕರು ಮಾಸ್ಕ್‌ ಇಲ್ಲದೆ ಸಂಚಾರ ನಡೆಸಿದರು. 

ಬೆಂಗಳೂರು (ಡಿ.25): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಮಾಸ್ಕ್‌ (ಮುಖಗವಸು) ಕಡ್ಡಾಯ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಪ್ರಯಾಣಿಕರು ಮಾಸ್ಕ್‌ ಇಲ್ಲದೆ ಸಂಚಾರ ನಡೆಸಿದರು. ನಗದಲ್ಲಿ ಬಿಎಂಟಿಸಿಯ ಐದು ಸಾವಿರಕ್ಕೂ ಅಧಿಕ ಬಸ್‌ಗಳು ಸೇವೆ ಲಭ್ಯವಿದ್ದು, ಇವುಗಳಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ನಿತ್ಯ ಸಂಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದರೂ ಕೆಲ ದೇಶಗಳಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಶನಿವಾರದಿಂದ ಮಾಸ್ಕ್‌ ಕಡ್ಡಾಯ ನಿಯಮ ಜಾರಿಗೆ ತಂದಿತ್ತು. 

ಶನಿವಾರ ಸಿಬ್ಬಂದಿಗಳು, ಬಸ್‌ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿದ್ದರು. ಆದರೆ, ಬಸ್‌ಗಳಲ್ಲಿ ಬೆರಳೆಣಿಕೆಯಷ್ಟುಮಂದಿ ಮಾತ್ರ ಮಾಸ್ಕ್‌ ಧರಿಸಿದ್ದು ಕಂಡು ಬಂದಿತು. ಮಾಸ್ಕ್‌ ಧರಿಸಿರದ ಪ್ರಯಾಣಿಕರಿಗೆ ನಿಯಮದ ಬಗ್ಗೆ ಮಾಹಿತಿ ನೀಡಲಾಯಿತು. ಹಲವು ಪ್ರಯಾಣಿಕರಿಗೆ ಮಾಸ್ಕ್‌ ಕಡ್ಡಾಯ ಬಗ್ಗೆ ಮಾಹಿತಿಯೇ ಇರಲಿಲ್ಲ, ಬಸ್‌ಗಳ ನಿರ್ವಾಹಕರು, ಚಾಲಕರು ಸೋಂಕು ಹರಡದಂತೆ ಮುಂಜಾಗ್ರತಾ ದೃಷ್ಟಿಯಿಂದ ಮಾಸ್ಕ್‌ ಕಡ್ಡಾಯವಾಗಿ ಧರಿಸಿ ಎಂದು ಜಾಗೃತಿ ಮೂಡಿಸಿದರು. ಮಾಸ್ಕ್‌ ಇದ್ದು ನಿರ್ಲಕ್ಷ್ಯ ತೋರಿದ ಪ್ರಯಾಣಿಕರಿಗೆ ಮಾಸ್ಕ್‌ ಧರಿಸದಿದ್ದರೆ ಟಿಕೆಟ್‌ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕೆಲ ಬಸ್‌ಗಳಲ್ಲಿ ಪ್ರಯಾಣಿಕರು ಬೆಂಗಳೂರಿನಲ್ಲಿ ಸೋಂಕು ಹೆಚ್ಚಿಲ್ಲದಿದ್ದರೂ ಅನಗತ್ಯ ನಿಯಮವೇಕೆ? ಎಂದು ಬಸ್‌ ನಿರ್ವಾಹಕರನ್ನು ಪ್ರಶ್ನಿಸಿದ್ದು, ಬಿಎಂಟಿಸಿ ವಿರುದ್ಧವು ಕಿಡಿಕಾರಿದರು.

Corona Crisis: ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್‌ ಕಡ್ಡಾಯ

ಮಾಸ್ಕ್‌ ಮಾರಾಟ ಜೋರು: ಮಾಸ್ಕ್‌ ಕಡ್ಡಾಯ ನಿಯಮದಿಂದ ಮೆಜೆಸ್ಟಿಕ್‌, ಶಿವಾಜಿನಗರ ಬಸ್‌ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ಕೆ.ಆರ್‌.ಮಾರುಕಟ್ಟೆ, ಬನಶಂಕರಿ ಟಿಟಿಎಂಸಿ, ಜಯನಗರ ಟಿಟಿಎಂಸಿ, ವಿಜಯನಗರ ಟಿಟಿಎಂಸಿ ಸೇರಿದಂತೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಮಾಸ್ಕ್‌ ಮಾರಾಟ ಜೋರಿತ್ತು. ನಿಲ್ದಾಣ ಪ್ಲಾಟ್‌ಫಾರಂಗಳಲ್ಲಿ, ಮಳಿಗೆಗಳಲ್ಲಿ, ಪಾದಾಚಾರಿ ಮಾರ್ಗಗಳಲ್ಲಿ ಮಾಸ್ಕ್‌ ಮಾರಾಟ ಮಾಡುತ್ತಿದ್ದರು. ಕೆಲ ವ್ಯಾಪಾರಿಗಳು ಬಸ್‌ಗಳ ಒಳಗೆ ಹತ್ತಿ ಮಾಸ್ಕ್‌ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದವು. ಮಾಸ್ಕ್‌ ಇಲ್ಲ ಎಂದು ಕಾರಣ ಹೇಳುವ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಲಭ್ಯವಿದ್ದ ಮಾಸ್ಕ್‌ ಖರೀದಿ ಧರಿಸಿ ಆ ಬಳಿಕ ಬಸ್‌ನಲ್ಲಿ ಪ್ರಯಾಣಿಸುವಂತೆ ನಿರ್ವಾಹಕರು ಸೂಚನೆ ನೀಡಿದರು.

ಬೂಸ್ಟರ್‌ ಡೋಸ್‌ಗೆ ಹೆಚ್ಚಿದ ಬೇಡಿಕೆ: ಕೋವಿಶೀಲ್ಡ್‌ಗಾಗಿ ಕೇಂದ್ರಕ್ಕೆ ಮನವಿ

ಶೇ.30ಕ್ಕಿಂತಲೂ ಕಡಿಮೆ ಮಾಸ್ಕ್‌ಧಾರಿಗಳು: ಕೆಲ ಬಸ್‌ಗಳಲ್ಲಿ ಪ್ರಯಾಣಿಕರು ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಮಾಸ್ಕ್‌ ಕಡ್ಡಾಯ ನಿಯಮದ ಕುರಿತು ವಾದ ವಿವಾದಗಳು ನಡೆದಿವೆ. ಮಾಸ್ಕ್‌ ಹಾಕಿಕೊಳ್ಳದಿದ್ದರೆ ಟಿಕೆಟ್‌ ನೀಡಬಾರದು ಅಥವಾ ದಂಡ ವಿಧಿಸಬಹುದು ಎಂಬ ನಿಯಮವನ್ನು ಜಾರಿಗೊಳಿಸಬೇಕು. ಆಗ ಮಾತ್ರ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುತ್ತಾರೆ. ಶನಿವಾರ ಶೇ.30 ಕ್ಕಿಂತಲೂ ಕಡಿಮೆ ಮಂದಿ ಮಾಸ್ಕ್‌ ಧರಿಸಿದ್ದರು ಎಂದು ಬಿಎಂಟಿಸಿ ಸಿಬ್ಬಂದಿ ತಿಳಿಸಿದರು.