ವಾಷಿಂಗ್ಟನ್‌(ಮಾ.25): 4 ಲಕ್ಷ ಮಂದಿಗೆ ವ್ಯಾಪಿಸಿರುವ ಕೊರೋನಾ ವೈರಸ್‌ ಅನ್ನು ಚೀನಾವೇ ಹುಟ್ಟುಹಾಕಿ ಅದನ್ನು ವಿಶ್ವಕ್ಕೆ ಹಬ್ಬಿಸಿದೆ ಎಂದು ಆರೋಪಿಸಿ ಚೀನಾ ವಿರುದ್ಧ ಅಮೆರಿಕದ ವಕೀಲರೊಬ್ಬರು ಕಾನೂನು ಸಮರ ಹೂಡಿದ್ದಾರೆ. ಅಲ್ಲದೆ, ಈ ತಪ್ಪಿಗಾಗಿ 20 ಟ್ರಿಲಿಯನ್‌ ಅಮೆರಿಕ ಡಾಲರ್‌(1500 ಲಕ್ಷ ಕೋಟಿ ರು.) ಅನ್ನು ಚೀನಾ ನೀಡಬೇಕು ಎಂದು ವಕೀಲ ಲ್ಯಾರಿ ಕ್ಲೇಮನ್‌ ತಮ್ಮ ದಾವೆಯಲ್ಲಿ ಒತ್ತಾಯಿಸಿದ್ದಾರೆ.

ಜಾಗತಿಕ ಪಿಡುಗಾಗಿ ಮಾರ್ಪಟ್ಟಿರುವ ಕೊರೋನಾವನ್ನು ವಿನ್ಯಾಸಗೊಳಿಸಿರುವ ಚೀನಾ ಅದನ್ನು ಯುದ್ಧದ ಜೈವಿಕ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿತ್ತು. ಈ ವೈರಸ್‌ ಬಿಡುಗಡೆ ಮೂಲಕ ಚೀನಾ ಸರ್ಕಾರ ಅಮೆರಿಕ, ಅಂತಾರಾಷ್ಟ್ರೀಯ ಕಾನೂನುಗಳು, ಒಪ್ಪಂದಗಳು ಹಾಗೂ ನಿಯಮಾವಳಿಗಳನ್ನು ಗಾಳಿಗೆ ತೂರಿದೆ. ಈ ಹಿನ್ನೆಲೆಯಲ್ಲಿ, 1500 ಲಕ್ಷ ಕೋಟಿ ರು. ಅನ್ನು ಪರಿಹಾರವಾಗಿ ನೀಡಬೇಕು ಎಂದು ಚೀನಾಕ್ಕೆ ಸೂಚಿಸಬೇಕು ಎಂದು ಕೋರಿ ಕ್ಲೇಮನ್‌ ಹಾಗೂ ಅವರ ವಕೀಲರ ತಂಡವಾದ ಫ್ರೀಡಂ ವಾಚ್‌ ಹಾಗೂ ಬಜ್‌ ಫೋಟೋಸ್‌ ಈ ಸಂಬಂಧ ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಅಲ್ಲದೆ, ಕೊರೋನಾವನ್ನು ಅಮೆರಿಕ ನಾಗರಿಕರು ಹಾಗೂ ತನ್ನ ಶತ್ರು ರಾಷ್ಟ್ರಗಳ ಪ್ರಜೆಗಳನ್ನು ಕೊಲ್ಲುವ ಸಲುವಾಗಿ ಚೀನಾ ಈ ವೈರಸ್‌ ಅನ್ನು ಸಿದ್ಧಪಡಿಸಿ, ಪ್ರಯೋಗಾಲಯದಲ್ಲಿ ಇಟ್ಟುಕೊಂಡಿತ್ತು. ಆದರೆ, ಯಾವುದೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳದೆ ಅನಿರೀಕ್ಷಿತವಾಗಿ ವುಹಾನ್‌ನಲ್ಲಿರುವ ವುಹಾನ್‌ ವೈರಾಣು ಸಂಸ್ಥೆಯಿಂದ ಈ ವೈರಸ್‌ ಅನ್ನು ಚೀನಾ ಬಿಡುಗಡೆ ಮಾಡಿದೆ. ಈ ಮೂಲಕ ಚೀನಾ ಅಕ್ರಮ ಎಸಗಿದೆ ಎಂದು ಈ ಅರ್ಜಿಯಲ್ಲಿ ದೂರಲಾಗಿದೆ.