ಜೆರುಸಲೇಂ(ಮಾ.31): ಕೊರೋನಾ ತಡೆಗಾಗಿ ಸಂಪೂರ್ಣ ದೇಶವನ್ನೇ ಲಾಕ್‌ಡೌನ್‌ ಮಾಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು, ಇದೀಗ ಸ್ವತಃ ತಾವೇ ಕೊರೋನಾ ಶಂಕೆಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು 14 ದಿನಗಳ ಕಾಲ ಪ್ರತ್ಯೇಕವಾಗಿರಲು ಬಯಸಿದ್ದಾರೆ.

ಇಸ್ರೇಲ್‌ ಶಾಸಕಾಂಗ ವ್ಯವಹಾರಗಳ ಕುರಿತಾದ ಪ್ರಧಾನಿ ನೆತಾನ್ಯಾಹು ಅವರ ಆಪ್ತರೊಬ್ಬರಿಗೆ ಸೋಮವಾರ ಕೊರೋನಾ ಪತ್ತೆಯಾಗಿದೆ. ಹೀಗಾಗಿ ಮುಂದಾಲೋಚನಾ ಕ್ರಮವಾಗಿ ಅವರು ತಾವೇ ಕ್ವಾರಂಟೈನ್‌ ವಿಧಿಸಿಕೊಂಡಿದ್ದಾರೆ.

ಇಸ್ರೇಲ್‌ನಲ್ಲಿ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಯಾವುದೇ ವ್ಯಕ್ತಿ ತನ್ನ ಮನೆಯಿಂದ 100 ಮೀಟರ್‌ಗಿಂತ ಹೆಚ್ಚು ದೂರ ಹೋಗುವಂತಿಲ್ಲ. ಆದರೆ, ಆಹಾರ ಪದಾರ್ಥಗಳ ಖರೀದಿಗಾಗಿ ಮಾತ್ರವೇ ಹೊರಹೋಗಲು ಅನುಮತಿ ಕರುಣಿಸಲಾಗಿದೆ.

ಇದುವರೆಗೂ ಇಸ್ರೇಲ್‌ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಗೆ ಸಾಂಕ್ರಮಿಕ ಕೊರೋನಾ ಅಂಟಿದ್ದು, ಇವರಲ್ಲಿ 16 ಮಂದಿ ಸಾವನ್ನಪ್ಪಿ 134 ಮಂದಿ ಗುಣಮುಖರಾಗಿದ್ದಾರೆ.