ನವದೆಹಲಿ(ಮಾ.26): ದೇಶದಲ್ಲಿ ಕೊರೋನಾ ವೈರಸ್ ಅಪಾಯ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆ  ಹೆಚ್ಚಳವಾಗುತ್ತಿದೆ. ಬುಧವಾರ ಕೊರೋನಾ ಸೋಂಕಿತರ ಸಂಖ್ಯೆ 600ರ ಗಡಿ ದಾಟಿದೆ. ಹೀಗಿರುವಾಗ ದೆಹಲಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೇ ಕೊರೋನಾ ಸೋಂಕು ತಗುಲಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಆಡಳಿತಾಧಿಕಾರಿಗಳು ಎಚ್ಚೆತ್ತಿದ್ದು, ಇಡೀ ಪ್ರದೇಶಕ್ಕೆ ನೋಟೀಸ್ ಜಾರಿಗೊಳಿಸಿದ್ದಾರೆ. 

ಹೌದು ಅಧಿಕಾರಿಗಳು ಜಾರಿಗೊಳಿಸಿರುವ ಈ ನೋಟಿಸ್‌ನಲ್ಲಿ ಮಾರ್ಚ್ 12 ರಿಂದ 18ರವರೆಗೆ ಯಾರೆಲ್ಲಾ ಈ ಮೊಹಲ್ಲಾ ಕ್ಲಿನಿಕ್‌ಗೆ ಬಂದಿದ್ದೀರೋ, ಅವರೆಲ್ಲರೂ ಮುಂದಿನ ಹದಿನೈದು ದಿನಗಳವರೆಗೆ ದಿಗ್ಬಂಧನದಲ್ಲಿರುವಂತೆ ಆದೇಶಿಸಲಾಗಿದೆ. ಈ ಪ್ರಕರಣ ಈಶಾನ್ಯ ದೆಹಲಿಯ ಮೌಜ್ಪುರ್ ಪ್ರದೇಶದಲ್ಲಿ ನಡಡೆದಿದೆ.

ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಮ್‌ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ನೋಟಿಸ್ ಶೇರ್ ಮಾಡಲಾಗಿದೆ. ಇನ್ನು ದಿಗ್ಬಂಧನದಲ್ಲಿರುವ ಸಂದರ್ಭದಲಲ್ಲಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಜಿಲ್ಲಾ ಕಂಟ್ರೋಲ್ ರೂಂ ಸಂಪರ್ಕಿಸುವಂತೆ ಸೂಚಿಸಲಾಗಿದೆ. 

ಇನ್ನು ಈ ಮೊಹಲ್ಲಾ ಕ್ಲಿನಿಕ್‌ಗೆ ಪ್ರತಿದಿನ ಸುಮಾರು 150 ರಿಂದ 200 ಮಂದಿ ರೋಗಿಗಳು ಬರುತ್ತಿದ್ದರೆನ್ನಲಾಗಿದೆ. ಹೀಗಿರುವಾಗ ಭಾನುವಾರ ರಜಾದಿನವಾಗಿರುವುದರಿಂದ 12 ರಿಂದ 18ರವರೆಗೆ ಈ ಕ್ಲಿನಿಕ್ ಆರು ದಿನ ಕಾರ್ಯ ನಿರ್ವಹಿಸಿದ್ದು, ಈ ನಡುವೆ 1000 ಮಂದಿ ಇಲ್ಲಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಇದರಿಂದ ಭಾರೀ ಅಪಾಯವಿದೆ ಎನ್ನಲಾಗಿದೆ.