ಬ್ಯಾಂಕಾಕ್‌(ಮಾ.30): ಕೊರೋನಾ ವೈರಸ್ ವಿಶ್ವದಾದ್ಯಂತ ಹರಡಿಕೊಂಡಿರುವ ಹಿನ್ನೆಲೆ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಕೊರೋನಾ ವೇಗವಾಗಿ ಹರಡುತ್ತಿರುವುದರಿಂದ ಎಲ್ಲಾ ರಾಷ್ಟ್ರಗಳಿಗೂ ಇದೊಂದು ಸಂಕಷ್ಟದ. ಹೀಗಿರುವಾಗ ಜನ ಸಾಮಾನ್ಯರಿಗೆ ಇಂತಹ ಸಮಯದಲ್ಲಿ ತಮ್ಮ ನಾಯಕರ ಬೆಂಬಲ ಅತಿ ಅಗತ್ಯ. ಆದರೆ ಇಲ್ಲೊಬ್ಬ ರಾಜ ಇಂತಹ ಪರಿಸ್ಥಿತಿಯಲ್ಲೂ ಐಷಾರಾಮಿ ಹೋಟೆಲ್‌ನಲ್ಲಿ ಇಪ್ಪತ್ತು ಯುವತಿಯರೊಂದಿಗೆ ಐಸೋಲೇಷನ್‌ನಲ್ಲಿದ್ದಾರೆ.

ಹೌದು ಥಾಯ್ಲೆಂಡ್‌ನ ರಾಜ ಮಹಾ ವಜಿರ್ಲಾಂಕೋರ್ನ್, ತನ್ನ 20 ಸಖಿಯರ ಜೊತೆ ಜರ್ಮನಿಯ ಒಂದು ಐಷಾರಾಮಿ ಹೋಟೆಲ್‌ ಸೇರಿದ್ದಾರೆ. ಜರ್ಮನಿಯ ಟ್ಯಾಬ್ಲಾಯ್ಡ್ ಬಿಲ್ಡ್ ವರದಿಯನ್ವಯ 67 ವರ್ಷದ ಈ ರಾಜ ಇಲ್ಲಿನ ಸ್ಥಳೀಯ ಆಡಳಿತ ಮಂಡಳಿಯ ಅನುಮತಿ ಪಡೆದು ಜರ್ಮನಿಯ ಬವಾರಿಯಾದಲ್ಲಿರುವ ಗ್ರ್ಯಾಂಡ್ ಹೋಟೆಲ್ ಸೋನೆಎಂಬಿಚೆಲ್ ಬುಕ್ ಮಾಡಿದ್ದಾರೆ. ಇಲ್ಲಿ ಅವರು 20 ಯುವತಿಯರು ಹಾಗೂ ಅನೇಕ ಆಳುಗಳೊಂದಿಗೆ ಉಳಿದುಕೊಳ್ಳಲಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರ ನಾಲ್ವರು ಪತ್ನಿಯರು ಉಳಿದುಕೊಂಡಿದ್ದಾರಾ ಎಂಬ ಮಾಹಿತಿ ನೀಡಿಲ್ಲ. ಹೀಗಿರುವಾಗ ಈ ಪ್ರದೇಶದಲ್ಲಿರುವ ಇತರ ಎಲ್ಲಾ ಹೋಟೆಲ್‌ಗಳನ್ನು ಬಂದ್ ಮಾಡುವಂತೆಯೂ ಆದೇಶಿಸಲಾಗಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರೋನಾಗೆ ರಾಜಮನೆತನದ ಮೊದಲ ಬಲಿ, ರಾಜಕುಮಾರಿ ಸಾವು!

ಇನ್ನು ಕೆಲ ದಿನಗಳ ಹಿಂದಷ್ಟೇ ಡೈಲಿ ಮೇಲ್ ತನ್ನ ವರದಿಯಲ್ಲಿ ಮಲೇಷ್ಯಾದ ರಾಜ ಹಾಗೂ ರಾಣಿ ಸೆಲ್ಫ್ ಐಸೋಲೇಷನ್‌ನಲ್ಲಿರುವ ಬೆನ್ನಲ್ಲೇ, ಥಾಯ್ಲೆಂಡ್ ರಾಜ ಕೂಡಾ ಇಂತುದೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿತ್ತು. 

ಇನ್ನು ಥಾಯ್ಲೆಂಡ್‌ನಲ್ಲಿ ಕೊರೋನಾ ಅಟ್ಟಹಾಸ ಹೇಗಿದೆ ಎಂಬುವುದನ್ನು ಗಮನಿಸುವುದಾದರೆ, ಇಲ್ಲಿ ಈವರೆಗೂ 1,388 ಮಂದಿಗೆ ಸೋಂಕು ತಗುಲಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ರಾಜ ಎನಿಸಿಕೊಂಡವನು ಇಂತಹ ಐಷಾರಾಮಿ ಜೀವನ ನಡೆಸಲು ಮುಂದಾಗಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.