ವಾಷಿಂಗ್ಟನ್‌(ಮಾ.25): ವಿಶ್ವಾದ್ಯಂತ ಹಬ್ಬಿರುವ ಮಾರಕ ಕೊರೋನಾ ವೈರಸ್‌ಗೆ ಈಗ ‘ವಿಶ್ವದ ದೊಡ್ಡಣ್ಣ’ ಅಮೆರಿಕ ಕೂಡ ತತ್ತರಿಸುತ್ತಿದೆ. ಸೋಮವಾರ ಒಂದೇ ದಿನ ಅಮೆರಿಕದಲ್ಲಿ 10 ಸಾವಿರ ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದ್ದರೆ, ಒಂದೇ ದಿನ 130 ಸಾವುಗಳು ಸಂಭವಿಸಿವೆ. ಕೊರೋನಾ ಸೋಂಕು ಪತ್ತೆಯಾದ ಬಳಿಕ ಇಷ್ಟೊಂದು ಜನರು ಆ ವ್ಯಾಧಿಗೆ ತುತ್ತಾಗುತ್ತಿರುವುದು ಹಾಗೂ ಬಲಿಯಾಗುತ್ತಿರುವುದು ಅಮೆರಿಕದಲ್ಲಿ ಇದೇ ಮೊದಲು.

ಸೋಮವಾರ 10 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅಮೆರಿಕದಲ್ಲಿ ಕೊರೋನಾಗೆ ತುತ್ತಾದವರ ಸಂಖ್ಯೆ 43734ಕ್ಕೆ ಜಿಗಿತ ಕಂಡಿದೆ ಎಂದು ಸೋಂಕು ಪ್ರಕರಣಗಳ ದತ್ತಾಂಶ ನಿರ್ವಹಿಸುತ್ತಿರುವ ‘ವಲ್ಡೋರ್‍ಮೀಟರ್‌’ ವೆಬ್‌ಸೈಟ್‌ ವರದಿ ಮಾಡಿದೆ. ಇದೇ ವೇಳೆ ಸಾವಿನ ಸಂಖ್ಯೆ 550ಕ್ಕೇರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಕೊರೋನಾ ಮತ್ತಷ್ಟುಹಾನಿ ಉಂಟು ಮಾಡಬಹುದು ಎಂಬ ಭೀತಿ ಆವರಿಸಿಕೊಂಡಿದೆ.

ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಅಮೆರಿಕವನ್ನು ಲಾಕ್‌ಡೌನ್‌ ಮಾಡುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಆದರೆ ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸುವ ಸ್ಪಷ್ಟಸುಳಿವು ನೀಡಿದ್ದಾರೆ. ಇಂತಹ ಕ್ರಮ ಕೈಗೊಂಡರೆ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ನ್ಯೂಯಾರ್ಕ್ನಲ್ಲಿ ಘೋರ ಸ್ಥಿತಿ:

ಕೊರೋನಾಗೆ ಅಮೆರಿಕದಲ್ಲೇ ಅತಿ ಹೆಚ್ಚು ಬಾಧಿತವಾಗಿರುವುದು ನ್ಯೂಯಾರ್ಕ್ ನಗರ. ಅಮೆರಿಕದಲ್ಲಿ ಕಂಡುಬಂದಿರುವ ಸೋಂಕಿತರ ಪೈಕಿ ಪ್ರತಿ ಇಬ್ಬರಲ್ಲಿ ಒಬ್ಬರು ನ್ಯೂಯಾರ್ಕಿನವರಾಗಿದ್ದಾರೆ. ಸೋಮವಾರ ಒಂದೇ ದಿನ ಅಲ್ಲಿ 5085 ಪ್ರಕರಣಗಳು ಕಂಡುಬಂದಿವೆ. ಅಮೆರಿಕದಲ್ಲಿ ದೃಢಪಟ್ಟಿರುವ ಒಟ್ಟಾರೆ ಪ್ರಕರಣಗಳ ಪೈಕಿ ನ್ಯೂಯಾರ್ಕ್ ಪಾಲೇ 20875. ನ್ಯೂಯಾರ್ಕ್ವೊಂದರಲ್ಲೇ 157 ಮಂದಿ ಸಾವಿಗೀಡಾಗಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಅಧ್ಯಾದೇಶವೊಂದನ್ನು ಹೊರಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜೀವ ರಕ್ಷಕ ಔಷಧಗಳನ್ನು ದಾಸ್ತಾನು ಮಾಡುವುದು ಹಾಗೂ ಮಿತಿಮೀರಿದ ಬೆಲೆಗೆ ಮಾರುವುದನ್ನು ನಿಷೇಧಿಸಿದ್ದಾರೆ. ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ಗಳಿಗೂ ಈ ನಿಷೇಧ ಅನ್ವಯವಾಗಲಿದೆ.

ನ್ಯೂಯಾರ್ಕ್ನಲ್ಲಿ ಕೊರೋನಾ ಸುನಾಮಿ

ನ್ಯೂಯಾರ್ಕ್: ಕೊರೋನಾ ವೈರಸ್‌ ನ್ಯೂಯಾರ್ಕ್ನಲ್ಲಿ ಸುನಾಮಿ ಅಲೆಯಂತೆ ಕಾಡುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಎರಡರಿಂದ ಮೂರು ವಾರಗಳಲ್ಲಿ ನ್ಯೂಯಾರ್ಕ್ ನಗರದ ಆರೋಗ್ಯ ವ್ಯವಸ್ಥೆಯೇ ನೆಲಕಚ್ಚಲಿದೆ ಎಂದು ಸ್ವತಃ ಗವರ್ನರ್‌ ಆ್ಯಂಡ್ರೂ ಗುವಮೋ ಅವರೇ ಹೇಳಿಕೊಂಡಿದ್ದಾರೆ.

ಪ್ರತಿ ಎರಡೂವರೆ ದಿನಕ್ಕೆ ಪ್ರಕರಣಗಳ ಸಂಖ್ಯೆ ದ್ವಿಗುಣವಾಗುತ್ತಲೇ ಹೋಗುತ್ತಿದೆ. ಗ್ರಾಫ್‌ ತಗ್ಗಿಸಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಆ ಗ್ರಾಫ್‌ ಸುನಾಮಿ ಅಲೆಯಂತಾಗಿದೆ ಎಂದು ತಿಳಿಸಿದ್ದಾರೆ.