ಕೊಪ್ಪಳ(ಮಾ.29): ಕೊರೋನಾ ಮಹಾಮಾರಿ ನಿಯಂತ್ರಿಸಲು ಭಾರತವನ್ನೇ ಲಾಕ್‌ಡೌನ್‌ ಮಾಡಲಾಗಿದೆ. ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದ ಗುಳೆ ಹೋದವರು ಮತ್ತು ಗುಳೆ ಬಂದವರು ಅಲ್ಲಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯಿಂದಲೇ ಗುಳೆ ಹೋದ ಸಾವಿರಕ್ಕೂ ಅಧಿಕ ಜನರು ಗೋವಾ, ತಮಿಳುನಾಡು ಸೇರಿದಂತೆ ನಾನಾ ಜಿಲ್ಲೆಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

ಸಿಲುಕಿದವರು:

ಕೊಪ್ಪಳ ತಾಲೂಕಿನಿಂದ ಗುಳೆ ಹೋಗಿ ಉಡುಪಿಯಲ್ಲಿ ಇದ್ದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 20ಕ್ಕೂ ಅಧಿಕ ಜನ ಇರುವ ಇವರು ಕಳೆದ ನಾಲ್ಕು ದಿನಗಳಿಂದ ರೂಮಿನಲ್ಲಿಯೇ ಇದ್ದಾರೆ. ಊಟಕ್ಕೂ ಸಮಸ್ಯೆಯಾಗಿದೆ. ನಮಗೆ ನಮ್ಮೂರಿಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಅಂಗಲಾಚುತ್ತಿದ್ದಾರೆ.

ಇನ್ನು ದೆಹಲಿ ಮತ್ತಿತರರ ಭಾಗದಿಂದ ಈ ಭಾಗದಲ್ಲಿ ಲೋಡ್‌ ಮಾಡಲು ಬಂದಿದ್ದ ಲಾರಿ ಡ್ರೈವರ್‌ಗಳು ಹಾಗೂ ಢಾಬಾದವರು ದಾರಿಯಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಥ 30-40 ಜನರು ನಮ್ಮನ್ನು ದೆಹಲಿಗೆ ಕಳುಹಿಸಿಕೊಡಿ ಎಂದು ಅಂಗಲಾಚುತ್ತಿರುವ ವೀಡಿಯೋ ವೈರಲ್‌ ಆಗಿದೆ.

ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಅಂಧ: ಊರಿಗೆ ಕಳುಹಿಸಿ ಮಾನವೀಯತೆ ಮೆರೆದ ಪತ್ರಕರ್ತರು

ನಮಗೆ ನೀರು ಇಲ್ಲ, ತಿನ್ನಲು ಏನೂ ಇಲ್ಲ. ನಾವು ಊರಿಗೆ ಹೋಗುವುದಕ್ಕೂ ಆಗುತ್ತಿಲ್ಲ. ದಯಮಾಡಿ ನಮ್ಮನ್ನು ಕಳುಹಿಸಿಕೊಡಿ ಎಂದು ಕೇಳುತ್ತಿದ್ದಾರೆ. ಅಲ್ಲದೆ ಇವರಲ್ಲಿ ಕೆಲವರು ದುಡಿಯಲು ಬಂದವರು ನಡೆದುಕೊಂಡೇ ಪ್ರಯಾಣ ಮಾಡುತ್ತಿರುವ ದೃಶ್ಯ ಮನಕಲಕುವಂತಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ಇಲ್ಲಿ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 20 ಜನರು ಕೊಪ್ಪಳ ನಗರದ ಕೊಠಡಿಯಲ್ಲಿಯೇ ಇದ್ದಾರೆ. ನಮಗೆ ಆಹಾರ ಸಾಮಗ್ರಿಯೂ ಅಷ್ಟಕಷ್ಟೇ ಇದೆ. ಹೀಗಾಗಿ, ಊರಿಗೆ ಕಳುಹಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ತಾಂಡಕ್ಕೆ ಬಂದರು:

ತಮಿಳನಾಡು ಮತ್ತು ಮಂಡ್ಯ ಭಾಗದಲ್ಲಿ ಕಬ್ಬುಕಡಿಯಲು ಹೋಗಿ ಸಿಲುಕಿ ಹಾಕಿಕೊಂಡಿದ್ದ ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾದ ನೂರಾರು ಜನರು ಕಳೆದೆರಡು ದಿನಗಳಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಜಿಲ್ಲಾಡಳಿತದ ಸಹಾಯಹಸ್ತದಿಂದ ಹೇಗೋ ಬಂದಿಳಿದಿದ್ದಾರೆ. ಆದರೆ, ಇವರನ್ನು ಚಿಕಿತ್ಸೆಗೆ ಒಳಪಡಿಸಿ ಎಂದು ಗೊಗರೆಯುತ್ತಿದ್ದಾರೆ ಸ್ಥಳೀಯರು.

ಸಾರ್‌ ದುಡಿಯಲು ಬಂದ ನಾವು ಈಗ ಉಡುಪಿಯಲ್ಲಿ ಇದ್ದೇವೆ. ನಮ್ಮನ್ನು ನಮ್ಮೂರಿಗೆ ಕರೆದುಕೊಂಡು ಹೋಗಿ ಸಾರ್‌. ಇಲ್ಲಿ ಊಟಕ್ಕೂ ಇಲ್ಲದಂತೆ ಆಗಿದೆ. ಮೂರು ದಿನದಿಂದ ರೂಮಿನಲ್ಲಿಯೇ ಇದ್ದೇವೆ ಎಂದು ನಿಂಗಜ್ಜ ಚಮಕನಳ್ಳಿ (9019348937) ಹೇಳಿದ್ದಾರೆ.