ನೆಲಮಂಗಲ(ಮಾ.29): ಕೊರೋನಾ ಭೀತಿಯಿಂದ ಮತ್ತು ಕೂಲಿಯಿಲ್ಲದ ಕಾರಣ ರಾಜಧಾನಿ ಬೆಂಗಳೂರಿನಿಂದ ಹೊರಟು ನೆಲಮಂಗಲದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಮತ್ತು 48, ಎರಡು ಹೆದ್ದಾರಿಗಳಲ್ಲಿ ಕೂಲಿ ಕಾರ್ಮಿಕರು  ಕಂಡು ಬಂದರು.

ಉತ್ತರ ಕರ್ನಾಟಕದ ಕಡೆ ಅಥವಾ ಹಾಸನ ಮಂಗಳೂರು ಭಾಗಕ್ಕಾಗಲೀ ಹೋಗುವ ಕೂಲಿ ಕಾರ್ಮಿಕರು ಅಥವಾ ಇತರೆ ದಾರಿ ಹೋಕರುಗಳನ್ನು ಕಂಡು ಮರುಗುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

ಲಾಕ್‌ಡೌನ್‌ ಮಧ್ಯೆಯೂ ಫ್ರೀ ಕ್ಯಾಪ್ಸಿಕಂ: ಸಿಕ್ಕಿದ್ದೇ ಚಾನ್ಸ್‌ ಅಂತ ಮುಗಿಬಿದ್ದ ಜನ!

ಬೆಂಗಳೂರಿನಿಂದ ತಮ್ಮೂರಿನೆಡೆಗೆ ಹೊರಟ ನೂರಾರು ಮಂದಿಗೆ ಪಟ್ಟಣದ ಹೊರಭಾಗ ತುಮಕೂರು ರಸ್ತೆಯಲ್ಲಿ ತಮ್ಮ ಟ್ರ್ಯಾಕ್ಟರ್‌ ಮತ್ತು ವಾಹನಗಳಲ್ಲಿ ಅತಿ ಹೆಚ್ಚು ಜನರನ್ನು ಕುರಿಗಳಂತೆ ತುಂಬಿಕೊಂಡು ದೂರದ ಊರಿಗೆ ಹೋಗುತ್ತಿರುವುದನ್ನು ಕಂಡ ಜಿಲ್ಲಾಡಳಿತ ತಡೆದು ನಿಮ್ಮೆಲ್ಲರಿಗೂ ಊಟ ಮತ್ತು ವಸತಿ ಕಲ್ಲಿಸುವುದಾಗಿ ತಿಳಿಸಿದರೂ, ದಮ್ಮಯ್ಯ ನಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಅಂಗಲಾಚುತ್ತಿದ್ದಾರೆ.

ವಿವಿಧ ಸಂಘಟನೆಗಳಿಂದ ನೆಲಮಂಗಲದ ತುಮಕೂರು ರಸ್ತೆಯ ಜಾಸ್‌ಟೂಲ್‌ ಬಳಿಯ ಆಂಜನೇಯಸ್ವಾಮಿ ದೇವಾಲಯದ ಸಮೀಪ ಸಾಗುತ್ತಿದ್ದ ನೂರಾರು ಉತ್ತರ ಕರ್ನಾಟಕ ಬಡ ಕೂಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ಊಟ ಮತ್ತು ನೀರು ಹಾಗೂ ಮಾಸ್ಕ್‌ನ್ನು ವಿತರಿಸಲಾಯಿತು.

ದಿನಂಪ್ರತಿ ಕನಿಷ್ಠ 300 ಮಂದಿಗೆ ನೆಲಮಂಗಲದ ಹೊರಭಾಗ ತುಮಕೂರು ರಸ್ತೆಯಲ್ಲಿ ಸಾಗುವ ದಾರಿ ಹೋಕರು ಮತ್ತು ನಿರಾಶ್ರಿತರಿಗೆ ಊಟ ಮತ್ತು ನೀರನ್ನು ವಿತರಿಸಲು ನಿರ್ಧರಿಸಲಾಗಿದೆ.