ಬೆಂಗಳೂರು(ಏ.05): ಕೊರೋನಾ ವೈರಾಣು ನಿಯಂತ್ರಿಸಲು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಇದುವರೆಗೂ 1.43 ಲಕ್ಷ ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ) ಕಿಟ್‌ ಸರಬರಾಜು ಮಾಡಲಾಗಿದ್ದು, ಇನ್ನೂ 9.80 ಲಕ್ಷ ಪಿಪಿಇ ಕಿಟ್‌ಗಳ ಸರಬರಾಜಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಶನಿವಾರ ಕೋವಿಡ್‌-19 ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ 18.33 ಲಕ್ಷ ಎನ್‌95 ಮಾಸ್ಕ್‌ ಸರಬರಾಜಿಗೆ ಕಾರ್ಯಾದೇಶ ನೀಡಲಾಗಿದ್ದು, 4.13 ಲಕ್ಷ ಎನ್‌ 95 ಮಾಸ್ಕ್‌ ಸರಬರಾಜಾಗಿವೆ. ಜತೆಗೆ 1570 ವೆಂಟಿಲೇಟರ್‌ಗಳಿಗೆ ಆದೇಶ ಮಾಡಿದ್ದು, ಈವರೆಗೆ 17 ಮಾತ್ರ ಸರಬರಾಜು ಮಾಡಲಾಗಿದೆ. ಮುಂದಿನ ವಾರದಲ್ಲಿ ಮತ್ತೆ 20 ವೆಂಟಿಲೇಟರ್‌ಗಳು ಬರಲಿವೆ ಎಂದು ಮಾಹಿತಿ ನೀಡಿದರು.

ನನ್ನ, ರಾಮುಲು ಮಧ್ಯೆ ವೈಮನಸ್ಯವಿಲ್ಲ: ಸುಧಾಕರ್‌

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಗೂ ವೆಂಟಿಲೇಟರ್‌ ಅಳವಡಿಸಿಲ್ಲ. ಇಬ್ಬರಿಗೆ ಮಾತ್ರ ಆಕ್ಸಿಜನ್‌ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕೋವಿಡ್‌-19 ಆರೈಕೆ ಮಾಡುತ್ತಿರುವ ನರ್ಸ್‌ಗಳು, ವೈದ್ಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದ್ದು, ಅವರ ಆರೋಗ್ಯ ಕಾಪಾಡಲು ಕೂಡ ಆದ್ಯತೆ ನೀಡಲಾಗಿದೆ. ಹಾಗೆಯೇ ಬೆಂಗಳೂರಿನಲ್ಲಿ 31 ಫೀವರ್‌ ಕ್ಲಿನಿಕ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿಡ್‌-19 ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ್ದೇವೆ. ಪಕ್ಷಭೇದ ಇಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸುವ ಕುರಿತು ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆಂದು ಕ್ಯಾಬಿನೇಟ್‌ ಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್‌ ರಚನೆ ಮಾಡಲಾಗಿದೆ. ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 17 ಸಮಿತಿ ಮಾಡಲಾಗಿದೆ. ಸಹಾಯವಾಣಿಗಳು ಮತ್ತು ಕೋವಿಡ್‌-19 ವಾರ್‌ ರೂಮ್‌ಗಳನ್ನು ಸ್ಥಾಪಿಸಿದ್ದು, ಅವು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿವೆ. ಇದುವರೆಗೆ 128 ಮಂದಿ ಕೊರೋನಾ ಸೋಂಕಿತರು ಇದ್ದು, ಅವರಲ್ಲಿ 11 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ಕೊರೋನಾ ವೈರಾಣು ಸೋಂಕು ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಸೋಂಕು ನಿಯಂತ್ರಣಕ್ಕೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವ ದಾನಿಗಳ ಕೊರತೆ ಇಲ್ಲ. ಆದರೆ, ಅವರು ನೀಡಿದ ಆರ್ಥಿಕ ನೆರವು ದುರುಪಯೋಗ ಆಗದಂತೆ ತಡೆಗಟ್ಟಬೇಕಿದೆ. ಆದ್ದರಿಂದ ಎಲ್ಲರೂ ಶಕ್ತಿಮೀರಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.