ಉಡುಪಿ(ಏ.03): ಕ್ವಾರಂಟೈನ್‌ ನಿಯಮವನ್ನು ಪಾಲಿಸದ ಉಡುಪಿ ಜಿಲ್ಲೆಯ ಕೊರೋನಾ ವೈರಾಣು ಸೋಂಕಿತನ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಿರುವ ಜಿಲ್ಲಾಡಳಿತ, ಈತನ ಸಂಪರ್ಕಕ್ಕೆ ಬಂದು ಸೋಂಕಿತರಾದವರ ಚಿಕಿತ್ಸಾ ವೆಚ್ಚವನ್ನೂ ಈ ವ್ಯಕ್ತಿಯಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಕಾಪು ತಾಲೂಕಿನ ಮಣಿಪುರ ಗ್ರಾಮದ 35 ವರ್ಷದ ಈ ವ್ಯಕ್ತಿ ದುಬೈಯಿಂದ ಬಂದ ಮೇಲೆ ಮನೆಯೊಳಗೆ ಇರುವಂತೆ ಸೂಚಿಸಲಾಗಿತ್ತು. ಆದರೆ, ಆತ ಮನೆಯಿಂದ ಹೊರಗೆ ಬಂದು ಜನರ ನಡುವೆ ಇತರರಿಗೆ ಕೊರೋನಾ ಹರಡುವ ಆತಂಕವನ್ನು ಮೂಡಿಸಿದ್ದಾನೆ. ಇದು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾದ್ದರಿಂದ, ಅದರನ್ವಯ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಮಾ.18ರಂದು ಆತ ದುಬೈಯಿಂದ ಊರಿಗೆ ಬಂದಿದ್ದ, 21ರಂದು ಕೊರೋನ ರೋಗದ ಲಕ್ಷಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. 25ರಂದು ಆತನಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಆತ 18ರಿಂದ 21ರ ಮಧ್ಯೆ ಹೋಮ್‌ ಕ್ವಾರಂಟೈನ್‌ ಪಾಲಿಸದೆ ಊರು ತುಂಬಾ ತಿರುಗಾಡಿ, ಕ್ರಿಕೆಟ್‌ ಆಡಿದ್ದಾನೆ.