ಭಾರತ್ ಲಾಕ್‌ಡೌನ್: ತರಕಾರಿ ಅಂಗಡಿಯಿಟ್ಟ ಟೆಕ್ಕಿಗಳು!
ತರಕಾರಿ ಅಂಗಡಿಯಿಟ್ಟ ಸಾಫ್ಟ್‌ವೇರ್ ಉದ್ಯೋಗಿಗಳು| ಲಾಕ್‌ಡೌನ್ ಬಳಿಕ ಹಾವೇರಿಗೆ ಬಂದಿರುವ ಯುವಕರಿಂದ ಸೇವೆ| ಸ್ಪೇ ಸೇಫ್ ಹಾವೇರಿ ಡಾಟ್ ಕಾಂ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೂ ಬುಕಿಂಗ್ ವ್ಯವಸ್ಥೆ|
ನಾರಾಯಣ ಹೆಗಡೆ
ಹಾವೇರಿ(ಏ.08): ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ತಮ್ಮ ಗೆಳೆಯರೊಂದಿಗೆ ಸೇರಿ ಹಾವೇರಿಯಲ್ಲಿ ತರಕಾರಿ ಅಂಗಡಿ ತೆರೆದಿದ್ದಾರೆ. ಜತೆಗೆ, ವೆಬ್‌ಸೈಟ್ ಆರಂಭಿಸಿ ಆನ್‌ಲೈನ್ ಮೂಲಕವೇ ತಮ್ಮೂರಿನ ಜನರಿಗೆ ಅಗತ್ಯವಿರುವ ತರಕಾರಿ, ದಿನಸಿಯನ್ನು ಮನೆ-ಮನೆಗೆ ತಲುಪಿಸುವ ಸೇವೆ ಮಾಡುತ್ತಿದ್ದಾರೆ.
ಸುಶಿಲೇಂದ್ರ ಕುಲಕರ್ಣಿ, ಪವನ್ ಕುಲಕರ್ಣಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಗಂಗಾಧರ, ಶಶಾಂಕ ಎಣ್ಣಿಯವರ ಸೇರಿದಂತೆ ಐದಾರು ಜನ ಗೆಳೆಯರು ಸೇರಿ ಇಲ್ಲಿಯ ವಿದ್ಯಾನಗರದ ದತ್ತಾತ್ರೇಯ ದೇವಸ್ಥಾನದ ಬಳಿ ಪುಟ್ಟತರಕಾರಿ ಅಂಗಡಿ ತೆರೆದಿದ್ದಾರೆ.
ಕೊರೋನಾ ಮಧ್ಯೆಯೂ ಪೌರ ಕಾರ್ಮಿಕರ ಶ್ರಮ: ಇವರಿಗೇಕಿಲ್ಲ ವಿಮೆ?
ಕೊರೋನಾ ವೈರಸ್ ಹರಡದಂತೆ ಎಲ್ಲರೂ ಮನೆಯಲ್ಲಿರುವುದೇ ಒಳಿತು ಎಂಬ ಕಾರಣಕ್ಕೆ ಇ ಕಾಮರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಶೀಲೇಂದ್ರ ಕುಲಕರ್ಣಿ ಅವರು ‘ಸ್ಟೇ ಸೇಫ್ ಹಾವೇರಿ ಡಾಟ್ ಕಾಂ’ ಎಂಬ ವೆಬ್‌ಸೈಟ್ ಆರಂಭಿಸಿ ಆನ್‌ಲೈನ್ ಮೂಲಕ ತರಕಾರಿ ಖರೀದಿಗೆ ವೇದಿಕೆ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಂಡರು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದರಿಂದ ಮತ್ತಷ್ಟುಪ್ರೇರಣೆಗೊಂಡ ಇವರು, ಸಣ್ಣ ತರಕಾರಿ ಅಂಗಡಿಯನ್ನೂ ತೆರೆದರು.
ಅದಕ್ಕಾಗಿ ಆಯಾ ದಿನಕ್ಕೆ ಬೇಡಿಕೆ ಬರಬಹುದಾದ ಅಂದಾಜಿನಲ್ಲಿ ಮೊದಲ ದಿನ ರಾತ್ರಿಯೇ ಹಳ್ಳಿಗಳಿಗೆ ಹೋಗಿ ರೈತರಿಂದ ನೇರವಾಗಿ ಸೊಪ್ಪು, ತರಕಾರಿ ಖರೀದಿಸುತ್ತಿದ್ದಾರೆ. ತಂದ ತರಕಾರಿಗಳನ್ನು ಎಡಿಬಲ್ ಸ್ಯಾನಿಟೈಸರ್‌ನಿಂದ ಶುದ್ಧೀಕರಿಸುತ್ತಾರೆ. ನೋ ಲಾಸ್ ನೋ ಪ್ರಾಫಿಟ್ ಆಧಾರದಲ್ಲಿ . ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: ಟೆಕ್ಕಿಗಳಿಂದ ತರಕಾರಿ ಮಾರಾಟ!
ದಿನಸಿ ಬೇಕಿದ್ದರೂ ತರಕಾರಿಯೊಂದಿಗೆ ಮನೆಗೇ ತಲುಪಿಸುವ ಸೇವೆಯನ್ನೂ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಮಾಡುತ್ತಿದ್ದಾರೆ. ತಮ್ಮೂರಿನ ಜನರ ಒಳಿತಿಗಾಗಿ ನೀಡುತ್ತಿರುವ ಈ ಸೇವೆಯನ್ನು ಪ್ರಶಂಸಿಸುತ್ತಿದ್ದಾರೆ.
ಮನೆಯಿಂದ ಹೊರಬಂದರೆ ಅಪಾಯದ ಈ ಪರಿಸ್ಥಿತಿಯನ್ನು ಅರಿತು ಲಾಭ ನಷ್ಟವಿಲ್ಲದೇ ಜನರಿಗೆ ಅಗತ್ಯವಿರುವ ತರಕಾರಿ, ದಿನಸಿಯನ್ನು ಅವರ ಮನೆಗೇ ತಲುಪಿಸುವ ಸೇವೆಯನ್ನು ಸ್ನೇಹಿತರೊಂದಿಗೆ ಸೇರಿ ಆರಂಭಿಸಿದ್ದೇವೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಾಫ್ಟ್‌ವೇರ್ ಉದ್ಯೋಗಿ ಸುಶೀಲೇಂದ್ರ ಕುಲಕರ್ಣಿ ಅವರು ಹೇಳಿದ್ದಾರೆ.