ಶಹಾಪುರ(ಏ.08): ಏ.1ರಂದು ಬೆಂಗಳೂರಿನಿಂದ ವಾಪಸ್ಸಾದ ನಂತರ, ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ತಾಲೂಕಿನ ಗ್ರಾಮದವೊಂದರ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ.

ಕೊರೋನಾ ಸೋಂಕು ತಗುಲಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಬಾಲಕಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆಂದು ಕಲಬುರಗಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳಂತೆ ಬಾಲಕಿಯ ಶವವನ್ನು ಐವರು ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅನುಮಾನಗಳು ಹೆಚ್ಚಾದರೆ ಬಾಲಕಿಯ ತಂದೆ, ತಾಯಿ ಸೇರಿದಂತೆ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮಗ ICUನಲ್ಲಿ, ತಾಯಿ ಕೊರೋನಾ ಕರ್ತವ್ಯದಲ್ಲಿ; ಅವರೇ ಆಶಾ ಕಾರ್ಯಕರ್ತೆ ದಾನಮ್ಮ

2 ದಿನದ ಬಳಿಕ ಜ್ವರ, ನೆಗಡಿ:

ಲಾಕ್‌ಡೌನ್‌ ಘೋಷಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಬಾಲಕಿಯ ತಂದೆ, ತಾಯಿ ಸೇರಿದಂತೆ, ಸುಮಾರು 35-40 ಜನರ ಈ ಭಾಗದ ಕಾರ್ಮಿಕರು ಗೂಡ್ಸ್‌ ವಾಹನದಲ್ಲಿ ಗ್ರಾಮಕ್ಕೆ ವಾಪಸ್ಸಾಗಿದ್ದರು. ಇದಾದ 2 ದಿನಗಳಲ್ಲಿ ಬಾಲಕಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಮೊದಲಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಅದು ಫಲಕಾರಿಯಾಗದಾಗ ತಾಲೂಕು ಆಸ್ಪತ್ರೆಗೆ ಮಂಗಳವಾರ ಕರೆದು ತಂದಾಗ ಬಾಲಕಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.