ಮಂಡ್ಯ(ಮಾ.25): ಭಾರತೀನಗರದ ಡಾಕ್ಟರ್‌ ಮತ್ತು ಉದ್ಯಮಿಯೊಬ್ಬರಿಗೆ ಕೊರೋನಾ ವೈರಸ್‌ ಹರಡಿದೆ ಎಂದು ಕಿಡಿಗೇಡಿಗಳು ಸುಳ್ಳುಸುದ್ದಿ ಹಬ್ಬಿಸಿದ ಪರಿಣಾಮ ಜನರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ಸಮೀಪದ ಮುಟ್ಟನಹಳ್ಳಿಯಲ್ಲಿ ನಡೆದಿದೆ.

ಚಿಕ್ಕರಸಿನಕರೆ ಹೋಬಳಿ ವ್ಯಾಪ್ತಿಯ ಮುಟ್ಟನಹಳ್ಳಿಯ ಚರ್ಮ, ಲೈಂಗಿಕ ರೋಗತಜ್ಞ ಡಾ.ನಾಗರಾಜು, ಉದ್ಯಮಿ, ಆರ್ಕೆಡ್‌ ಮಾಲೀಕ ಸಜ್ಜನ್‌ಸಿಂಗ್‌ ಎಂಬುವರಿಗೆ ಕೊರೋನಾ ವೈರಸ್‌ ಸೋಕಿದೆ ಎಂದು ಕಿಡಿಗೇಡಿಗಳು ಸುದ್ದಿ ಹರಡಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಗ್ರಾಮಸ್ಥರು ಮತ್ತು ಅವರ ಸ್ನೇಹಿತರು, ಸಂಬಂಧಿಗಳು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಇದು ಸುಳ್ಳು ಎಂದು ತಿಳಿದ ಬಳಿವೇ ಎಲ್ಲರೂ ನಿಟ್ಟುಸಿರು ಬಿಡುವಂತಾಯಯಿತು.

ಕೊರೋನಾ ಹೆಚ್ಚಿದ ಭೀತಿ: ಭಯ ಬೇಡ, ಆತಂಕ ನಿವಾರಣೆಗೆ ಹೀಗ್ಮಾಡಿ

ಮೈಸೂರಿನಲ್ಲಿ ವಾಸವಾಗಿರುವ ಡಾ.ನಾಗರಾಜು ಕೆ.ಎಂ.ದೊಡ್ಡಿಯಲ್ಲಿ ವಿಜಯಾ ಕ್ರೀನಿಕ್‌ ನಡೆಸುತ್ತಿದ್ದಾರೆ. ಇವರ ಪತ್ನಿ ಡಾ.ವಿಜಯಲಕ್ಷ್ಮಿ ಮೈಸೂರು ಮೆಡಿಕಲ… ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗರಾಜು ಅವರ ಮನೆ ಕೆಲಸದಾಕೆಯ ಮಗಳು ವಿದೇಶದಲ್ಲಿದ್ದಳು. ಅವಳು ಈಚೆಗಷ್ಟೇ ಊರಿಗೆ ವಾಪಸ್‌ ಆಗಿದ್ದಳು. ಅವಳ ಮೂಲಕ ಕೊರೋನಾ ಹಬ್ಬಿದೆ ಎಂದು ಸುದ್ದಿ ಹರಡಿದರೆ, ಇನ್ನೊಂದೆಡೆ, ಡಾ.ನಾಗರಾಜು ಅವರ ಸ್ನೇಹಿತರೊಬ್ಬರು ವಿದೇಶದಲ್ಲಿದ್ದು ಈಗ ಊರಿಗೆ ಬಂದಿದ್ದಾರೆ. ಅವರಿಂದ ವೈರಸ್‌ ತಗುಲಿದೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಇದರಿಂದ ಡಾ.ನಾಗರಾಜು ಮತ್ತು ಕುಟುಂಬಕ್ಕೆ ಮಾನಸಿಕ ಕಿರಿಕಿರಿ ಉಂಟಾಗಿತ್ತು. ಸ್ವತಃ ಡಾಕ್ಟರ್‌ ಆಗಿರುವ ನಾಗರಾಜು ಅವರು ಕೊರೋನಾ ಹರಡಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ಸೋಂಕು ತಡೆಗೆ 2 ತಿಂಗಳು ಸ್ವಯಂ ದಿಗ್ಬಂಧನ ಹಾಕಿದ ಗ್ರಾಮಸ್ಥರು

ಇನ್ನು ಉದ್ಯಮಿ, ಸಜ್ಜನ್‌ ಆರ್ಕೆಡ್‌ ಮಾಲೀಕ ಸಜ್ಜನ್‌ ಸಿಂಗ್‌ ಅವರಿಗೆ ಕೊರೋನಾ ಸೋಂಕು ಇದೆ ಅವರನ್ನು ಪರೀಕ್ಷೆಗೆ ಜಿ.ಮಾದೇಗೌಡ ಆಸ್ಪತ್ರೆಗೆ ಕರೆದುಕೊಂಡು ಹೊಗಲಾಗಿದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ, ಇದು ಸುಳ್ಳು ನಾನು ಆರೋಗ್ಯವಾಗಿದ್ದೇನೆ ಎಂದು ಸಜ್ಜನ್‌ ಉತ್ತರಿಸುವುದರೊಳಗೆ ಸುಸ್ತಾಗಿ ಹೋಗಿದ್ದಾರೆ. ಇಬ್ಬರ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ ನಾಗರಾಜು ಮತ್ತು ಉದ್ಯಮಿ ಸಜ್ಜನ್‌ಸಿಂಗ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಭಾರತೀನಗರದಲ್ಲಿ ಯಾರಿಗೂ ಕೊರೋನಾ ಸೋಂಕು ಹರಡಿಲ್ಲ. ಇದರ ಬಗ್ಗೆ ಸುಳ್ಳು ಸುದ್ದಿಗಳನ್ನು ನಂಬಬಾರದು ಹಾಗೂ ಹರಡಿಸಬಾರದು. ಈಗಾಗಲೇ ಜನರಲ್ಲಿ ಕೊರೋನಾ ವೈರಸ್‌ ಬಗ್ಗೆ ಭಯದ ವಾತವಾರಣ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ 144 ಸೆಕ್ಷನ್‌ ಜಾರಿಗೊಳಿಸಿದೆ. ಕೊರೋನಾ ವೈರಸ… ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದಿ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ವೃತ್ತ ನಿರೀಕ್ಷಕ ಶಿವಮಲವಯ್ಯ ಎಚ್ಚರಿಕೆ ನೀಡಿದ್ದಾರೆ.