ಲಂಡನ್‌ (ಏ. 08): ವಿಶ್ವದಾದ್ಯಂತ ಸುಮಾರು 13 ಲಕ್ಷ ಜನರಿಗೆ ತಗುಲಿ, 75000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ಸೋಂಕು, ಮಹಿಳೆಯರಿಗಿಂತ ಪುರುಷರನ್ನೇ ಹೆಚ್ಚು ಬಲಿ ಪಡೆಯುತ್ತಿದೆ. ಈ ಬಗ್ಗೆ ಸಾಕಷ್ಟುಚರ್ಚೆ ಕೂಡ ನಡೆದಿವೆ.

ಈ ನಡುವೆಯೇ ವಿವಿಧ ದೇಶಗಳಲ್ಲಿನ ಕೊರೋನಾ ದಾಖಲೆ ಆಧರಿಸಿ ಡಾ. ಕಯಾತ್‌ ಎಂಬವರು ಅಲ್‌ಜಝೀರಾದಲ್ಲಿ ಲೇಖನವೊಂದನ್ನು ಬರೆದಿದ್ದು, ಅದರಲ್ಲಿ ಮಹಿಳೆಯರಿಗಿಂತ ಪುರುಷರೇ ಏಕೆ ಹೆಚ್ಚು ಸೋಂಕಿಗೆ ಬಲಿಯಾಗುತ್ತಿದ್ದಾರೆ ಎಂಬುದರ ಕುರಿತು ಪಟ್ಟಿಮಾಡಿದ್ದಾರೆ. ಇದಕ್ಕೆ 5 ಕಾರಣಗಳನ್ನು ಅವರು ನೀಡಿದ್ದಾರೆ.

1. ಅನಾರೋಗ್ಯಕರ ಆರೋಗ್ಯ ಶೈಲಿ

ಇದು ಕೂಡ ಹೆಚ್ಚು ಪುರುಷರ ಸಾವಿಗೆ ಒಂದು ಕಾರಣ. ಪುರುಷರಲ್ಲಿ ತಂಬಾಕು ಸೇವನೆ ಮತ್ತು ಮದ್ಯಪಾನ ಪ್ರಮಾಣ ಮಹಿಳೆಯರಿಗಿಂತ 5 ಪಟ್ಟು ಹೆಚ್ಚಿದೆ. ಅದರಲ್ಲೂ ಕೊರೋನಾ ಸೋಂಕು ತಗುಲಿದ ವೇಳೆ ಧೂಮಪಾನಿಗಳು ಉಸಿರಾಟ ಮತ್ತು ನ್ಯುಮೋನಿಯಾ ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚು. ಆದರೆ ಇದೊಂದೇ ಕಾರಣ ಪುರುಷರ ಸಾವಿಗೆ ಹೆಚ್ಚು ಕಾರಣ ಎಂದು ಪೂರ್ಣವಾಗಿ ವಾದಿಸಲಾಗದು. ಏಕೆಂದರೆ ಇಟಲಿಯಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಧೂಮಪಾನ ಪ್ರಮಾಣ ಹೆಚ್ಚೂಕಡಿಮೆ ಒಂದೇ ಇದೆ. ಹೀಗಾಗಿ ಅಲ್ಲಿ ಸಾವಿಗೆ ಧೂಮಪಾನ ಪ್ರಮುಖ ಕಾರಣ ಎಂಬುದಕ್ಕೆ ಸಾಕ್ಷ್ಯಗಳಿಲ್ಲ.

ಕೊರೋನಾ ಆತಂಕ: ವಾಹನಕ್ಕೆ ಮುಗಿಬಿದ್ದು ಆಹಾರಧಾನ್ಯ ಹೊತ್ತೊಯ್ದ ಜನ!

2. ಕೈತೊಳೆವ ಅಭ್ಯಾಸ

ಕೊರೋನಾ ನಿಗ್ರಹದ ವಿಷಯದಲ್ಲಿ ಒಂದೇ ಕೈಯಿಂದ ಸೋಪ್‌ ಮೂಲಕ ಕೈತೊಳೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ. ಆದರೆ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಅಭ್ಯಾಸ ಕಡಿಮೆ. ಸ್ವಚ್ಛತೆಯಲ್ಲಿ ಮಹಿಳೆಯರಷ್ಟುಪುರುಷರು ಸೂಕ್ಷ್ಮಮತಿಗಳಲ್ಲ ಎಂದು ಹಲವು ಅಧ್ಯಯನಗಳೇ ಹೇಳಿವೆ.

2009ರಲ್ಲಿ ಅಮೆರಿಕದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಸಾರ್ವಜನಿಕ ಶೌಚಾಲಯದ ಬಳಸಿದ ಬಳಿಕ ಕೈತೊಳೆದುಕೊಳ್ಳುವ ಪುರುಷರ ಪ್ರಮಾಣ ಶೇ.31ರಷ್ಟಿದ್ದರೆ, ಮಹಿಳೆಯರಲ್ಲಿ ಆ ಪ್ರಮಾಣ ಶೇ.65ರಷ್ಟಿತ್ತು. ಆದರೆ ಈ ಅಂಶವೂ ಪೂರ್ಣವಾಗಿ ಪುರುಷರೇ ಏಕೆ ಹೆಚ್ಚು ಸಾವನ್ನಪ್ಪುತ್ತಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಕೊಡುವಲ್ಲಿ ವಿಫಲವಾಗಿದೆ. ಏಕೆಂದರೆ ಸೋಂಕು ತಗುಲಿದವರಲ್ಲಿ ಪುರುಷರ ಮತ್ತು ಮಹಿಳೆಯರ ಪ್ರಮಾಣ ಬಹುತೇಕ ಒಂದೇ ಇದೆ.

3. ಚಿಕಿತ್ಸೆ ಪಡೆವ ಪ್ರಮಾಣ

ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ನಡತೆ ಮತ್ತು ಆರೋಗ್ಯ ಸಾಕ್ಷರತೆ ಪ್ರಮಾಣದಲ್ಲಿ ಬಹಳ ವಿಭಿನ್ನತೆ ಇದೆ ಎನ್ನುತ್ತಿದೆ ಈ ವರದಿ. ಏಕೆಂದರೆ ಬಹುತೇಕ ಸಂದರ್ಭದಲ್ಲಿ ಪುರುಷರು ವೈದ್ಯರ ಬಳಿ ತೆರಳುವುದೇ ಇಲ್ಲ. ಅಲ್ಲದೆ ಪುರುಷರು ತಮಗೆ ಆಗಿರುವ ಸಮಸ್ಯೆಯನ್ನು ಒಪ್ಪಿಕೊಳ್ಳುವ ಪ್ರಮಾಣವೂ ಕಡಿಮೆ. ಈ ಅಂಶವನ್ನು ಆಧರಿಸಿ ಹೇಳುವುದಾದರೆ ಮಹಿಳೆಯರು ಸಮಸ್ಯೆ ಕಾಣಿಸಿಕೊಂಡಾಕ್ಷಣ ವೈದ್ಯರ ಸಲಹೆ ಪಡೆಯುತ್ತಿರುವುದು ಅವರಲ್ಲಿ ಸಾವಿನ ಪ್ರಮಾಣ ಕಡಿಮೆ ಇರಲು ಕಾರಣ.

ವಾಟ್ಸಾಪ್ ಅಡ್ಮಿನ್‌ಗಳೇ ಎಚ್ಚರವಿರಲಿ, ಗ್ರೂಪ್‌ಗಳ ಮೇಲೆ ನಿಗಾ

4. ರೋಗನಿರೋಧಕ ಶಕ್ತಿ

ವೈರಾಣು ದಾಳಿ ವೇಳೆ ಪುರುಷರಿಗಿಂತ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತದೆ ಎಂದು ವರದಿ ಹೇಳಿದೆ. ಅಂದರೆ ಪುರುಷರಿಗಿಂತ ವೇಗವಾಗಿ ಮಹಿಳೆಯರು ತಮ್ಮ ದೇಹದಿಂದ ಸೋಂಕು ದೂರ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

5. ಹೆಚ್ಚುವರಿ ಕ್ರೋಮೋಸೋಮ್‌

ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಲು ಮತ್ತೊಂದು ಕಾರಣ, ಅವರಲ್ಲಿರುವ ಹೆಚ್ಚುವರಿ ವರ್ಣತಂತು. ಮಹಿಳೆಯರು ಎರಡು ಎಕ್ಸ್‌ (ಎಕ್ಸ್‌ ಎಕ್ಸ್‌) ವರ್ಣತಂತುಗಳನ್ನು ಹೊಂದಿದ್ದರೆ, ಪುರುಷರು ಒಂದು (ಎಕ್ಸ್‌ ವೈ) ಮಾತ್ರ ಹೊಂದಿದ್ದಾರೆ. ನಮ್ಮ ದೇಹದಲ್ಲಿನ ರೋಗನಿರೋಧಕ ಪ್ರತಿಕ್ರಿಯೆಗಳನ್ನುನಿಯಂತ್ರಿಸುವ ಬಹುತೇಕ ಜೀನ್‌ (ಅನುವಂಶಿಕ ಧಾತುಗಳು) ಎಕ್ಸ್‌ ಕ್ರೋಮೋಸೋಮ್‌ಗಳ ಮೇಲೆ ನಿರ್ಧರಿತವಾಗಿವೆ. ಹೀಗಾಗಿ ಹೆಚ್ಚುವರಿ ಕ್ರೋಮೋಸೋಮ್‌ ಹೆಚ್ಚು ತ್ವರಿತವಾಗಿ ಪ್ರತಿಕ್ರಿಯಿಸುವ ಮೂಲಕ ಹೆಚ್ಚು ರೋಗನಿರೋಧಕ ಶಕ್ತಿ ನೀಡುತ್ತದೆ ಎಂಬುದು ವಿಜ್ಞಾನಿಗಳ ವಾದ.

ಚೀನಾ

ಸಾವಿನ ಪ್ರಮಾಣ

ಪುರುಷರು: ಶೇ.2.8

ಮಹಿಳೆಯರು: ಶೇ.1.7

ಇಟಲಿ

ಪುರುಷರು: ಶೇ.7.2

ಮಹಿಳೆಯರು: ಶೇ.4.1