ಬೆಂಗಳೂರು(ಮಾ.31): ವಿದೇಶ ಪ್ರಯಾಣದ ಹಿನ್ನೆಲೆ ಹಾಗೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿರದಿದ್ದರೂ ನಂಜನಗೂಡು ಔಷಧ ತಯಾರಿಕೆ ಕಂಪನಿಯ ಹತ್ತು ಉದ್ಯೋಗಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಕಂಪನಿಯು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾವಸ್ತುಗಳನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಗುರಿಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ನಂಜನಗೂಡು ಔಷಧ ತಯಾರಿಕೆ ಕಂಪನಿಯ ಉದ್ಯೋಗಿಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅವರಿಂದ ಮತ್ತೆ ಒಂಬತ್ತು ಮಂದಿಗೆ ಸೋಂಕು ಹರಡಿದ್ದು, ಒಂದೇ ಕಂಪನಿಯ ಹತ್ತು ಮಂದಿ ಸೋಂಕಿತರಾಗಿದ್ದಾರೆ. ಹೀಗಾಗಿ ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ಕಂಪನಿಯು ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ಪದಾರ್ಥಗಳ ಸ್ವಾ್ಯಬ್‌ ಅನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹೇಳಿದರು.

ಔಷಧ ಕಂಪನಿ 5 ನೌಕರರಿಗೆ ಸೋಂಕು: ಮೈಸೂರಲ್ಲಿ 1000 ಜನಕ್ಕೆ ವೈರಸ್‌ ಭೀತಿ!

ಚೀನಾದ ವಸ್ತುಗಳಿಂದಲೇ ಕೊರೋನಾ ವೈರಾಣು ನಂಜನಗೂಡಿನ ಕೈಗಾರಿಕೆಗೆ ಬಂದಿದ್ದರೂ ಇಷ್ಟುದಿನ ವೈರಾಣು ವಸ್ತುಗಳ ಮೇಲೆ ಜೀವಂತ ಇರುತ್ತದೆ ಎಂಬ ಖಚಿತತೆ ಇಲ್ಲ. ಆದರೂ, ನಮ್ಮ ತನಿಖೆಗೆ ಪೂರಕವಾದ ಕೆಲವೊಂದು ಮಾಹಿತಿ ದೊರೆಯಬಹುದು ಎಂಬ ಉದ್ದೇಶದಿಂದ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯದಲ್ಲೇ ಸೋಂಕಿನ ಮೂಲ ಪತ್ತೆ ಹೆಚ್ಚುತ್ತೇವೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.