ಕಲಬುರಗಿ(ಮಾ.25): ರೈತನ ಕೊರೋನಾ ಮುನ್ನೆಚ್ಚರಿಕೆ ಕಂಡು ಪಿಎಸ್ಐಯೊಬ್ಬರು ಸೆಲ್ಯೂಟ್ ಹೊಡೆದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮದಲ್ಲಿ ನಡೆದಿದೆ. ರೈತನಿಗೆ ಪಿಎಸ್ಐ ಸೆಲ್ಯೂಟ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ವಿಶ್ವಾದ್ಯಂತ ಕೊರೋನಾ ಹಾವಳಿಯಿಂದ ಸಾವಿವಾರು ಜನರು ಪ್ರಾಣಬಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಸಾಮಾಜಿ ಅಂತರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದೇ ಸಂದರ್ಭದಲ್ಲಿ ರೈತನೊಬ್ಬ ಹೆಲ್ಮೆಟ್ ಹಾಕಿಕೊಂಡು ಎತ್ತಿನ ಬಂಡಿ ಓಡಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ರಾಜ್ಯದಲ್ಲಿ ಕೊರೋನಾಗೆ 2ನೇ ಬಲಿ? ಗೌರಿಬಿದನೂರಿನ ವೃದ್ಧೆ ಸಾವು

ರೈತ ಲಕ್ಕಪ್ಪ ಎಂಬಾತ ಜಮೀನಿಗೆ ಹೋಗುವ ವೇಳೆ ಬಂಡಿಯಲ್ಲಿ ಹೆಲ್ಮೆಟ್ ಹಾಕಿಕೊಂಡು ಹೋಗುವ ವೇಳೆ ನಿಂಬರ್ಗಾ ಪಿಎಸ್‌ಐ ಸುರೇಶಕುಮಾರ ಬಂಡಿ ತಡೆದು ನಿಲ್ಲಿಸಿ ಏನಿದು ? ಎಂದು ಕೇಳಿದ್ದಾರೆ. ಕೊರೋನಾ ವೈರಸ್ ಬಾರದಿರಲಿ ಅಂತ ಹೆಲ್ಮೆಟ್ ಹಾಕಿದಿನಿ ಎಂದು ರೈತ ಹೇಳಿದ್ದಾನೆ. ಇದಕ್ಕೆ ಕೊರೋನಾ ತಡೆಯಲು ಮತ್ತೇನು ಮಾಡ್ತಿಯಾ ಎಂದು ಪಿಎಸ್‌ಐ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ  ರೈತ  ಗಂಟೆಗೊಮ್ಮೆ ಸಾಬೂನಿನಿಂದ ಕೈ ತೊಳೆಯುವೆ, ಕೆಮ್ಮು, ಸೀನು ಬಂದ್ರೆ ಮುಖಕ್ಕೆ ಬಟ್ಟೆ ಬಳಸುವೆ, ಜನಸಂದಣಿ ಇರುವ ಜಾಗದಲ್ಲಿ ಹೋಗೋದಿಲ್ಲ, ಹೆಲ್ಮೆಟ್ ಹಾಕೊಂಡೆ ಹೊಲಕ್ಕೆ ಹೋಗುವೆ ಎಂದ ರೈತ ಹೇಳಿದ್ದಾನೆ. 

ಲಾಕ್‌ಡೌನ್‌ ಎಫೆಕ್ಟ್‌: ತರಕಾರಿ ಬೆಲೆ ಬೆಳಗ್ಗೆ ಏರಿಕೆ, ಸಂಜೆ ಇಳಿಕೆ!

ರೈತ ಲಕ್ಕಪ್ಪನ ಕೊರೊನಾ ಮುನ್ನೆಚ್ಚರಿಕೆ ಕಂಡು ನಿಂಬರ್ಗಾ ಪಿಎಸ್‌ಐ ಸುರೇಶಕುಮಾರ ಶಹಬ್ಬಾಷ್ ಎಂದಿದ್ದಾರೆ. ಅಷ್ಟೇ ಅಲ್ಲ, ರೈತ ಲಕ್ಕಪ್ಪನಿಗೆ ಶೆಲ್ಯೂಟ್ ಹೊಡೆದು ಪಿಎಸ್‌ಐ ಸುರೇಶಕುಮಾರ ಗೌರವಿಸಿದ್ದಾರೆ.