ಕೊರೋನಾ ಭೀತಿ:'ಪೊಲೀಸರಿಂದಲೇ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ'
ಹಾವೇರಿ ಶಹರ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ನಿಯಮ ಉಲ್ಲಂಘನೆ| ಸಭೆಯಲ್ಲಿ ಅಕ್ಕಪಕ್ಕದಲ್ಲೇ ಕುರ್ಚಿ ಹಾಕಿ ಕುಳಿತು ನಿಯಮ ಗಾಳಿಗೆ ತೂರಿದ ಪೊಲೀಸರು| ಸ್ಯಾನಿಟೈಸರ್ ವ್ಯವಸ್ಥೆಯೂ ಇರಲಿಲ್ಲ| ಈ ವ್ಯವಸ್ಥೆಯನ್ನು ದೂರದಿಂದಲೇ ನೋಡಿ ಆತಂಕಗೊಂಡ ಅನೇಕರು|
ಹಾವೇರಿ(ಏ.06): ಕೊರೋನಾ ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ಹೇಳುತ್ತಿದ್ದ ಪೊಲೀಸರೇ ಆ ನಿಮಯ ಪಾಲಿಸುತ್ತಿಲ್ಲ. ಶನಿವಾರ ರಾತ್ರಿ ಇಲ್ಲಿಯ ಶಹರ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅಕ್ಕಪಕ್ಕದಲ್ಲೇ ಕುರ್ಚಿ ಹಾಕಿ ನಿಯಮ ಗಾಳಿಗೆ ತೂರಲಾಗಿದೆ.
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಧರ್ಮೀಯರು ಸಹಕರಿಸುವಂತೆ ಕೋರಲು ಶಹರ ಠಾಣೆಯಲ್ಲಿ ಸಭೆ ಕರೆದು ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಆದರೆ, ಪ್ರಮುಖವಾಗಿ ಪಾಲಿಸಬೇಕಾದ ಸಾಮಾಜಿಕ ಅಂತರವನ್ನು ಇಲ್ಲಿ ಪಾಲಿಸದ್ದಕ್ಕೆ ಅನೇಕರು ವಾಪಸಾದ ಘಟನೆ ನಡೆದಿದೆ.
ಲಾಕ್‌ಡೌನ್: ಬಡವರ ಮನೆ ಮನೆಗೆ ಗವಿಮಠ ಶ್ರೀಗಳಿಂದ ದವಸ- ಧಾನ್ಯ
ಸಾರ್ವಜನಿಕರಿಗೆ ಅಕ್ಕಪಕ್ಕದಲ್ಲೇ ಕುರ್ಚಿ ಹಾಕಲಾಗಿತ್ತು. ಸ್ಯಾನಿಟೈಸರ್ ವ್ಯವಸ್ಥೆಯೂ ಇರಲಿಲ್ಲ. ಈ ವ್ಯವಸ್ಥೆಯನ್ನು ದೂರದಿಂದಲೇ ನೋಡಿ ಆತಂಕಗೊಂಡ ಅನೇಕರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಭೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಯಾವ ಉದ್ದೇಶಕ್ಕಾಗಿ ಸಭೆ ಸೇರುತ್ತಿದ್ದೆವೆಯೋ ಅದರ ಮೂಲ ಆಶಯವನ್ನೇ ಪಾಲಿಸದಿರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.
ಅನಗತ್ಯವಾಗಿ ಮನೆಯಿಂದ ಹೊರಬರುವವರನ್ನು, ರಸ್ತೆಗಿಳಿಯುವ ಬೈಕ್ ಸವಾರರಿಗೆ ಲಾಠಿ ತೋರಿಸಿ, ಬುದ್ಧಿವಾದ ಹೇಳಿ ಲಾಕ್‌ಡೌನ್ ಆದೇಶ ಅನುಷ್ಠಾನಗೊಳಿಸಲು ಕಳೆದ 10 ದಿನಗಳಿಂದ ಪೊಲೀಸರು ಶ್ರಮಿಸುತ್ತಿದ್ದಾರೆ. ಆದರೆ, ಇಲಾಖೆಯಲ್ಲೇ ನಿಯಮ ಪಾಲನೆಯಾಗುತ್ತಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದರು.
ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಗೆ ಹೋಗಿದ್ದೆ. ಆದರೆ, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಲಾಗಿತ್ತು. ಈ ವಿಷಯವನ್ನು ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಹೇಳಿ ವಾಪಸ್ ಬಂದಿದ್ದೇನೆ. ಸಭೆ ಎಂದ ಮೇಲೆ ಎಲ್ಲರೂ ಬರುತ್ತಾರೆ. ಆಗ ಸುರಕ್ಷತೆಗೆ ಆದ್ಯತೆ ನೀಡಬೇಕಾಗುತ್ತದೆ. ಪೊಲೀಸರೇ ಹೀಗೆ ಮಾಡಿದರೆ ಯಾರಿಗೆ ಹೇಳುವುದು ಎಂದು ಹಿರಿಯ ವಕೀಲ ಎಸ್.ಆರ್. ಹೆಗಡೆ ಹೇಳಿದ್ದಾರೆ.