ಬೆಂಗಳೂರು(ಮಾ.30): ಲಾಕ್‌ಡೌನ್‌ ವೇಳೆ ಸಂಕಷ್ಟದಲ್ಲಿರುವವರ ನೆರವಿಗೆ ಸಹಾಯ ಹಸ್ತ ಚಾಚುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕರೆಗೆ ಹಲವು ಸಂಘ ಸಂಸ್ಥೆಗಳು ಹಾಗೂ ನೂರಾರು ಸಾರ್ವಜನಿಕರು ಸ್ಪಂದಿಸಿದ್ದು, ಬಡವರ ಹಸಿವು ನೀಗಿಸುವ ಅಭಿಯಾನಕ್ಕೆ ಭಾನುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ನಗರದ ಎಲ್ಲ ಠಾಣೆಗಳ ಮಟ್ಟದಲ್ಲೇ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಘ ಸಂಸ್ಥೆಗಳು ಹಾಗೂ ಜನರು ಉದಾರವಾಗಿ ಪೂರೈಕೆ ಮಾಡಿದ್ದಾರೆ. ಇವುಗಳನ್ನು ಪೊಲೀಸರು, ಲಾಕ್‌ ಡೌನ್‌ನಿಂದ ಸಂತ್ರಸ್ತರಾದವರಿಗೆ ವಿತರಿಸಿದ್ದಾರೆ.
‘ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡುವ ಬಯಸುವ ದಾನಿಗಳು, ಆಹಾರವನ್ನು ಪ್ಯಾಕ್‌ ಮಾಡಿ ಸಮೀಪದ ಪೊಲೀಸ್‌ ಠಾಣೆಗಳಿಗೆ ತಲುಪಿಸಿದರೆ ಅವುಗಳನ್ನು ಅಗತ್ಯವಿರುವ ಜನರಿಗೆ ಪೂರೈಕೆ ಮಾಡಲಾಗುತ್ತದೆ. ಈ ಕೆಲಸಕ್ಕೆ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರನ್ನು ನೋಡಲ್‌ ಅಧಿಕಾರಿ ನೇಮಿಸಲಾಗಿದ್ದು, ದಾನಿಗಳು ಜಂಟಿ ಆಯುಕ್ತರನ್ನು 9480801011 ಕರೆ ಮಾಡಿ ಸಂಪರ್ಕಿಸುವಂತೆ’ ಎಂದು ಡಿಜಿಪಿ ಪ್ರವೀಣ್‌ ಸೂದ್‌ ಟ್ವಿಟರ್‌ನಲ್ಲಿ ವಿನಂತಿಸಿದ್ದರು.

ಲಾಠಿ ಹಿಡಿದ ಖಡಕ್ ಪೊಲೀಸರಿಂದ ಮಾನವೀಯ ಕೆಲಸ..! ಸೌಟು ಹಿಡಿದ ಡಿಸಿಪಿ

ನಿರಾಶ್ರಿತರ ಕೇಂದ್ರ ತೆರೆದ ಡಿಸಿಪಿ ರೋಹಿಣಿ

ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್‌ ಸಪೆಟ್‌ ಅವರು, ವಿಭಾಗದ 12 ಠಾಣೆಗಳಲ್ಲಿ ‘ನಿರಾಶ್ರಿತ ಕೇಂದ್ರ ಹಾಗೂ ಕಮ್ಯೂನಿಟಿ ಕಿಚನ್ಸ್‌’ ಗಳನ್ನು ಆರಂಭಿಸಿದ್ದಾರೆ. ಶನಿವಾರ ರಾತ್ರಿಯಿಂದಲೇ ಜನರಿಗೆ ಆಹಾರ ಪೂರೈಸಲಾಗುತ್ತಿದೆ. ರಾತ್ರಿ 500 ಜನರಿಗೆ ಊಟ, ಭಾನುವಾರ ಬೆಳಗ್ಗೆ 650 ಜನರಿಗೆ ಉಪಾಹಾರ ವಿತರಿಸಲಾಗಿದ್ದು, ರಾತ್ರಿ ಸಹ ಅಷ್ಟೇ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಸಿಪಿ ರೋಹಿಣಿ ಕಟೋಟ್‌ ಸಪೆಟ್‌ ಹೇಳಿದ್ದಾರೆ.
ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ರಾಚೇನಹಳ್ಳಿ, ಮೇಸ್ತ್ರಿಪಾಳ್ಯ, ವಿಧಾನಸೌಧ ಲೇಔಟ್‌ನಲ್ಲಿರುವ ಬಡ ಕಾರ್ಮಿಕರ ಶೆಡ್‌ಗಳು, ತಿರುಮೇನಹಳ್ಳಿ ರೋಹಿಂಗ್ಯ ನಿರಾಶ್ರಿತರ ಶೆಡ್‌ಗಳಲ್ಲಿ ವಾಸವಿರುವ ನೂರಾರು ಮಂದಿಗೆ ಆಹಾರ ಪೂರೈಸಲಾಯಿತು.

ಕೊರೋನಾ ವಚನ ಬರೆದ ಪೊಲೀಸರು

ಕೊರೋನಾ ಸೋಂಕು ಕುರಿತು ಹಲವು ರೀತಿಯಲ್ಲಿ ಅರಿವು ಮೂಡಿಸುತ್ತಿರುವ ಸಂಚಾರ ವಿಭಾಗದ ಪೊಲೀಸರು, ಈಗ ಬಸವಣ್ಣನವರ ವಚನವನ್ನು ಜಾಗೃತಿಗೆ ಬಳಸಿಕೊಂಡಿದ್ದು ಅವರ ಕ್ರಿಯಾಶೀಲತೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.
‘ಕಳಬೇಡ ಕೊಲಬೇಡ’ ವಚನವನ್ನು ಪೊಲೀಸರು, ‘ಕೆಮ್ಮಬೇಡ ಸೀನಬೇಡ, ಗುಂಪುಗೂಡ ಬೇಡ, ಮಾಸ್ಕ್‌ ಧರಿಸದೆ ಇರಬೇಡ, ಕಣ್ಣು-ಮೂಗು ಮುಟ್ಟುತಲಿರಬೇಡ, ಕೈ ತೊಳೆಯುವುದು ಬಿಡಬೇಡ, ಇದೇ ಕರೊನಾ ಓಡಿಸುವ ಪರಿ’ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಈ ಸಲ ಕಪ್‌ ನಮ್ದೆ, ಜನರೆಲ್ಲ ಮನೆಯಲ್ಲಿದ್ದು ಸಹಕರಿಸಿದರೆ’ ಎಂದು ಪಂಚಿಂಗ್‌ ಮೂಲಕ ಜನ ಸಂದೇಶ ತಲುಸುವ ಕೆಲಸ ಆರಂಭಿಸಿದ್ದಾರೆ.