ಹಾವೇರಿ(ಮಾ.29): ಕೊರೋನಾ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿದ್ದರೂ ಮನೆಯಿಂದ ಹೊರ ಬೀಳುತ್ತಿರುವವರಿಗೆ ಮೊದಲು ಲಾಠಿ ರುಚಿ ತೋರಿಸಿದ್ದ ಇಲ್ಲಿಯ ಪೊಲೀಸರು, ಈಗ ದಂಡ ಪ್ರಯೋಗಿಸುತ್ತಿದ್ದಾರೆ.

ಶನಿವಾರ ಬೆಳಗ್ಗೆಯೇ ಈ ಕಾರ್ಯಾಚರಣೆಗಿಳಿದ ಸಂಚಾರಿ ಪೊಲೀಸರು, ನೂರಾರು ಬೈಕ್‌ ಸವಾರರಿಂದ ದಂಡ ವಸೂಲಿ ಮಾಡಿದ್ದಾರೆ. ಮನೆಗೆ ತರಕಾರಿ ಪೂರೈಸುವ ವ್ಯವಸ್ಥೆ ಮಾಡಿದ್ದರೂ ತರಕಾರಿ ಖರೀದಿಸಲೆಂದು ಬಂದವರಿಗೂ ದಂಡದ ಬಿಸಿ ತಾಗಿದೆ.

'ಛತ್ತೀಸ್‌ಗಡದಲ್ಲಿ ಸಿಲುಕಿದ ರಾಜ್ಯದ ವಿದ್ಯಾರ್ಥಿಗಳು: ಮರಳಿ ಕರೆತರಲು ಸಿಎಂ ಜತೆ ಚರ್ಚೆ'

ಇಲ್ಲಿಯ ಹೊಸ್ಮನಿ ಸಿದ್ದಪ್ಪ ವೃತ್ತದ ಮೂಲಕ ಸಂಚರಿಸುತ್ತಿದ್ದ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿದ ಪೊಲೀಸರು, ದಾಖಲೆ ಪರಿಶೀಲಿಸಿ ದಂಡ ಕಟ್ಟಿಸಿಕೊಂಡಿದ್ದಾರೆ. ಈ ವೇಳೆ ಅನೇಕರು ಜನಪ್ರತಿನಿಧಿಗಳಿಗೆ ಕರೆ ಮಾಡುವುದಾಗಿ ಹೇಳಿದ್ದಾರೆ. ಇದಾವುದಕ್ಕೂ ಕ್ಯಾರೇ ಎನ್ನದ ಸಂಚಾರಿ ಪೊಲೀಸರು, ಯಾರಿಗೆ ಕಾಲ್‌ ಮಾಡಿದರೂ ದಂಡ ಕಟ್ಟಿಯೇ ಹೋಗಬೇಕು ಎಂದು ದಬಾಯಿಸಿದ್ದಾರೆ. ಇದರಿಂದ ತಬ್ಬಿಬ್ಬಾದ ಕೆಲವರು ದಂಡ ಕಟ್ಟಿದ್ದಾರೆ. ದಂಡದ ವಿಷಯ ತಿಳಿದು ಅನೇಕ ಬೈಕ್‌ ಸವಾರರು ದೂರದಲ್ಲೇ ನಿಲ್ಲಿಸಿ ವಾಪಸ್‌ ಹಿಂದಕ್ಕೆ ಹೋದ ಘಟನೆಯೂ ನಡೆಯಿತು.

ಹೊಂದಿಕೊಳ್ಳುತ್ತಿರುವ ಜನ

ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಘೋಷಣೆ ಮಾಡಿರುವ ಲಾಕ್‌ಡೌನ್‌ಗೆ ಜಿಲ್ಲೆಯ ಜನತೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದು, ಶನಿವಾರ ಹೆಚ್ಚಾಗಿ ರಸ್ತೆಗಿಳಿಯದೇ ಮನೆಯಲ್ಲಿದ್ದರು. ಹೀಗಾಗಿ ಜನ ಸಂಚಾರ ಕಡಿಮೆಯಾಗಿತ್ತು.

ಲಾಲ್‌ಬಹದ್ದೂರ್‌ಶಾಸ್ತ್ರಿ ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ. ಪ್ರತಿಯೊಂದು ಬಡಾವಣಿಗಳಿಗೂ ಒಂದೊಂದು ವಾಹನದ ವ್ಯವಸ್ಥೆ ಮಾಡಿ ಮನೆಮನೆಗೆ ತರಕಾರಿ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರಸ್ತೆ ಮೇಲೆ ಹೆಚ್ಚು ವಾಹನವಾಗಲಿ, ಜನ ಸಂಚಾರವಾಗಲಿ ಕಾಣಲಿಲ್ಲ.

ಜಿಲ್ಲೆಯ ಪೆಟ್ರೋಲ್‌ ಬಂಕ್‌ಗಳಲ್ಲಿ ಸರ್ಕಾರಿ ಹಾಗೂ ಕರ್ತವ್ಯನಿರತ ವಾಹನಗಳಿಗೆ ಮಾತ್ರ ಪೆಟ್ರೋಲ್‌, ಡಿಸೈಲ್‌ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಪೆಟ್ರೋಲ್‌ ಬಂಕ್‌ಗಳಲ್ಲಿ ಗಸ್ತುಹೂಡಿರುವ ಪೊಲೀಸರು ಅನವಶ್ಯಕ ಓಡಾಟ ನಡೆಸುವವರಿಗೆ ನಿರ್ಬಂಧ ಹಾಕಿದ್ದಾರೆ. ದಿನಸಿ, ಶುದ್ಧ ಕುಡಿಯುವ ನೀರಿನ ಘಟಕಗಳ ಎದುರು ಮೂರಡಿಗಳ ಅಂತರದಲ್ಲಿ ನಿಂತು ಜನ ಸಾಮಾಜಿಕ ಅಂತರಕ್ಕೆ ಮಹತ್ವ ನೀಡಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಕಂಡುಬಂತು. ಔಷಧಿ ಅಂಗಡಿಗಳಲ್ಲಿ ಅಂತರ ಕಾಯ್ದುಕೊಂಡು ಔಷಧಿ ಖರೀದಿಸಿದರು.

ಗ್ರಾಮೀಣ ಭಾಗದಲ್ಲೂ ಮುನ್ನೆಚ್ಚರಿಕೆ:

ಗ್ರಾಮೀಣ ಭಾಗದಲ್ಲೂ ಜನ ಕೊರೋನಾ ಮುನ್ನೆಚ್ಚರಿಕೆ ಪಾಲಿಸುತ್ತಿದ್ದಾರೆ. ನೂರಾರು ಗ್ರಾಮಗಳು ರಸ್ತೆಗೆ ಬೇಲಿ ಹಾಕಿ ಸ್ವಯಂ ದಿಗ್ಬಂಧನಕ್ಕೊಳಗಾಗಿವೆ. ರೈತರು ಸೇರಿದಂತೆ ಯಾರೂ ಹಳ್ಳಿಯಿಂದ ಪೇಟೆಗಳತ್ತ ಬರುತ್ತಿಲ್ಲ. ಹೊರ ಊರುಗಳಿಂದ ಬರುವವರಿಗೂ ಆರೋಗ್ಯ ತಪಾಸಣೆ ಮಾಡಿಸಿಯೇ ಬಿಟ್ಟುಕೊಳ್ಳಲಾಗುತ್ತಿದೆ. ರೇಶನ್‌, ತರಕಾರಿ, ಶುದ್ಧ ಕುಡಿವ ನೀರಿನ ಘಟಕ ಸೇರಿದಂತೆ ಎಲ್ಲ ಕಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ.
ಆಯಾ ತಾಲೂಕುಗಳ ತಹಸೀಲ್ದಾರರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಸ್ಥಳೀಯ ನಗರಸಭೆ ಅಧಿಕಾರಿಗಳು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ಜನ ಒಂದೆಡೆ ಸೇರದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ವರದಿಯಾಗದಿದ್ದರೂ ಜನ ನಿಯಮ ಪಾಲಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.