ಬ್ಯಾಡಗಿ(ಮಾ.29): ಕೊರೋನಾ ವೈರಸ್‌ನಿಂದ ಛತ್ತೀಸ್‌ಗಡದ ಮಹಾಸಮುಂದ ನವೋದಯ ವಿದ್ಯಾಲಯದಲ್ಲಿ ಸಿಲುಕಿರುವ ಜಿಲ್ಲೆಯ 23 ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವ ಕುರಿತು ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದೇಶದಾದ್ಯಂತ ಒಟ್ಟು 169 ಶಾಲೆಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ, ಅದರಲ್ಲಿನ ಬಹುತೇಕ ಮಕ್ಕಳು ತಮ್ಮ ಸ್ವಂತ ಊರುಗಳಿಗೆ ವಾಪಸ್ಸಾಗುವ ಕುರಿತು ಮೊಬೈಲ್‌ ಫೋನ್‌ಗಳ ಮೂಲಕ ಸಂಬಂಧಿಸಿದ ಪ್ರಾಚಾರ್ಯರು ಹಾಗೂ ಪಾಲಕರಿಗೆ ದುಂಬಾಲು ಬಿದ್ದಿರುವ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ವಿದೇಶದಿಂದ ಬಂದವರಲ್ಲಿಲ್ಲ ಕೊರೋನಾ ಸೋಂಕು: ನಿಟ್ಟುಸಿರು ಬಿಟ್ಟ ಜನತೆ! 

ಪಾಲಕರು ನಿಶ್ಚಿಂತೆಯಿಂದಿರಿ:

ಹಾನಗಲ್ಲ ನವೋದಯ ವಿದ್ಯಾಲಯದಲ್ಲಿ ಅಭ್ಯಸಿಸುತ್ತಿರುವ ತಾಲೂಕಿನ ಕೆಲ ವಿದ್ಯಾರ್ಥಿಗಳ ಪಾಲಕರು ನಮ್ಮನ್ನು ವೈಯಕ್ತಿಕವಾಗಿ ಭೇಟಿ ನೀಡಿ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ, ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರದಿಂದ ಅಗಬೇಕಾಗಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಭರವಸೆ ನೀಡಿದ್ದೇನೆ. ಈ ವಿಷಯದ ಕುರಿತು ಪತ್ರಿಕೆಗಳಲ್ಲಿ ಸುದ್ದಿಯನ್ನು ಪ್ರಕಟಿಸುವ ಮೂಲಕ ನಮ್ಮನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಹೀಗಾಗಿ ಕಾರ್ಯಪ್ರವೃತ್ತನಾಗಿದ್ದು ಕೂಡಲೇ ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.