ಲಾಕ್‌ಡೌನ್ ಅವಧಿ ಮುಕ್ತಾಯದ ದಿನ ಹತ್ತಿರವಾಗುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರಿಂದ ಆತಂಕಗೊಂಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಾರ್ವಜನಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಬೆಂಗಳೂರು, (ಏ.05): ಕರ್ನಾಟಕದಲ್ಲಿ ಈವರೆಗೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 146ಕ್ಕೆ ತಲುಪಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು 11 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಕೇಸ್‌ಗಳು ಹೆಚ್ಚುತ್ತಿರುವುದರಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಆಯುಷ್ಮಾನ್‌ ಭಾರತ ಅಡಿ ಉಚಿತ ಕೊರೋನಾ ಚಿಕಿತ್ಸೆ!

ಅಷ್ಟೇ ಅಲ್ಲದೇ ಲಾಕ್‌ಡೌನ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅದು ಕೆಳಗಿನಂತಿದೆ ನೋಡಿ. 

ನಾಡಿನ ಜನತೆಗೆ ಮನವಿ
ಕಳೆದ ಕೆಲವು ದಿನಗಳಲ್ಲಿ ಕೋವಿಡ್19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. 

ಮನೆಯಲ್ಲೇ ಇದ್ದು, ಸುರಕ್ಷಿತವಾಗಿರುವುದು ಹಾಗೂ ಸೋಂಕು ಹರಡುವ ಸರಪಳಿಯನ್ನು ತುಂಡರಿಸುವುದು ಪ್ರಧಾನಮಂತ್ರಿಯವರು ಘೋಷಿಸಿದ ಲಾಕ್ ಡೌನ್ ನ ಆಶಯವಾಗಿತ್ತು.

ಆದರೆ ನಾಗರಿಕರು ಲಾಕ್ ಡೌನನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಲಾಕ್ ಡೌನ್ ಸಡಿಲಗೊಳಿಸುವ ಕೀಲಿಕೈ ನಿಮ್ಮ ಬಳಿಯೇ ಇದೆ ಎಂಬುದನ್ನು ಮರೆಯದಿರಿ.

ಬಂಧುಗಳೆ, ಚೆಂಡು ನಿಮ್ಮ ಅಂಗಳದಲ್ಲಿದೆ. ಲಾಕ್ ಡೌನನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ನಿಮ್ಮಿಂದ ಮಾತ್ರ ಸಾಧ್ಯ.

ಅನಗತ್ಯವಾಗಿ ಓಡಾಡಿ, ನಿಮ್ಮ ಹಾಗೂ ಇತರರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಬೇಡಿ. ಕೋವಿಡ್19 ತಡೆಗಟ್ಟಲು ನಾವೆಲ್ಲರೂ ಸಾಮೂಹಿಕವಾಗಿ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸೋಣ. ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಎಂದು ಬಿಎಸ್‌ವೈ ಮನವಿ ಮಾಡಿಕೊಂಡಿದ್ದಾರೆ.

Scroll to load tweet…
Scroll to load tweet…