ಬಾಯಾರಿಕೆಯಿಂದ ನರಳುತ್ತಿರುವ ಶ್ವಾನಗಳು: ನಾಯಿಗಳ ಹಸಿವು ನೀಗಿಸಿದ ಪ್ರಾಣಿಪ್ರಿಯರು
ಆಹಾರ ಹುಡುಕುತ್ತಾ ಎಲ್ಲೆಂದರಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳು| ನಾಯಿಗಳಿಗೆ ಆಹಾರ - ನೀರು ಪೂರೈಸಿ ಮಾನವೀಯತೆ ಮೆರೆದ ಉಡುಪಿಯ ಪ್ರಾಣಿಪ್ರಿಯರು| 100ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ 20ಕ್ಕೂ ಹೆಚ್ಚು ಮಂದಿ|
ಉಡುಪಿ(ಮಾ.30): ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗಿ, ಅಂಗಡಿ ಹೊಟೇಲುಗಳು ಮುಚ್ಚಿರುವುದರಿಂದ, ಬೀದಿಬದಿ ನಾಯಿಗಳು ಕಳೆದ ಕೆಲವು ದಿನಗಳಿಂದ ಹೊಟ್ಟೆಗಿಲ್ಲದೆ, ಆಹಾರ ಹುಡುಕುತ್ತಾ ಎಲ್ಲೆಂದರಲ್ಲಿ ಓಡಾಡುತ್ತಿವೆ. ಹಸಿವೆ ಬಾಯಾರಿಕೆಯಿಂದ ನರಳುತ್ತಿವೆ. ಇದನ್ನು ಮನಗಂಡ ಉಡುಪಿಯ ಹಲವಾರು ಪ್ರಾಣಿಪ್ರಿಯರು ಈ ನಾಯಿಗಳಿಗೆ ಆಹಾರ - ನೀರು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.
ಮಲ್ಪೆಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ವ್ (ಮ್ಯಾಕ್ಟ್) ಈ ಮೂಕಪ್ರಾಣಿಗಳಿಗೆ ಆಹಾರ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದು, ಅದಕ್ಕೆ ಸ್ಪಂದಿಸಿದ 20ಕ್ಕೂ ಹೆಚ್ಚು ಮಂದಿ 100ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡಿದ್ದಾರೆ.
ಸತ್ತರೂ ಬಿಡ್ತಿಲ್ಲ ಕೊರೋನಾ ಭಯ: ವೀಡಿಯೋ ಕಾಲ್‌ನಲ್ಲಿ ಮರಣೋತ್ತರ ಕ್ರಿಯಾಭಾಗ!
ಮಣಿಪಾಲದಲ್ಲಿ ಡಾ.ಸುಹಾಸ್ ಭಟ್ ಮತ್ತಿತರರು ಸುಮಾರು 120 ನಾಯಿಗಳಿಗೆ, ಉಡುಪಿಯ ರಘುವೀರ್ ಕಿಣಿ ತಂಡದವರು ಸುಮಾರು 300, ಅನ್ಸಾರ್ ಅಹಮದ್ ಬಳಗದವರು ಸುಮಾರು 200, ಮಲ್ಪೆ ಬಬಿತಾ ಮಧ್ವರಾಜ್ ಸುಮಾರು 50 ಹೀಗೆ ಅಲ್ಲಲ್ಲಿ ಪ್ರಾಣಿಪ್ರಿಯರು ಬೀದಿ ನಾಯಿಗಳಿಗೆ ಆಹಾರ ಇರಿಸಿ ಕರುಣೆ ತೋರಿಸಿದ್ದಾರೆ. ಉಡುಪಿಯ ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಪೃಥ್ವಿ ಪೈ ಅವರು ನಗರದ ಬೀಡಿನಗುಡ್ಡೆ ಪರಿಸರದಲ್ಲಿ ನಿತ್ಯವೂ ಹತ್ತಿಪ್ಪತ್ತು ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
ಸಂಘರ್ಷಕ್ಕೆ ಕಾರಣವಾದೀತು:
ನಗರದಲ್ಲಿ ಸಾವಿರಾರು ನಾಯಿಗಳಿವೆ. ಅವುಗಳಿಗೂ ಮನುಷ್ಯರಂತೆ ಹಸಿವೆ ಬಾಯಾರಿಕೆಯಾಗುತ್ತದೆ. ಅದನ್ನು ತಡೆಯಲಾಗದೆ ಅವು ಪರಸ್ಪರ ಕಚ್ಚಾಡಿಕೊಳ್ಳುವ, ಮನುಷ್ಯರ ಮೇಲೆರಗುವ ಸಾಧ್ಯತೆಗಳಿವೆ. ಆದ್ದರಿಂದ ಮಾನವ - ನಾಯಿ ಸಂಘರ್ಷವನ್ನು ತಡೆಯುವುದಕ್ಕೆ ಅವುಗಳಿಗೆ ಸಾಧ್ಯವಿರುವವರೆಲ್ಲರೂ ಆಹಾರ ನೀಡಬೇಕು ಎಂದು ಮ್ಯಾಕ್ಟ್ನ ಸಂಚಾಲಕಿ ಬಬಿತಾ ಮಧ್ವರಾಜ್ ವಿನಂತಿಸಿದ್ದಾರೆ.