ಮಂಗಳೂರು(ಮಾ.30): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್‌ ಆದೇಶ ಜಾರಿಗೊಳಿಸಿದ ಪರಿಣಾಮ ಕಾಸರಗೋಡಿನ ವಿದ್ಯಾನಗರದಲ್ಲಿ ಮರಣೋತ್ತರ ಕ್ರಿಯಾಭಾಗವನ್ನು ಪುರೋಹಿತರು ವೀಡಿಯೋ ಕಾಲ್‌ ಮೂಲಕ ನೆರವೇರಿಸಿದ ವಿದ್ಯಮಾನ ನಡೆದಿದೆ.

ವಿದ್ಯಾನಗರ ನೆಲಕ್ಕಳ ನಿವಾಸಿ ದಿ.ಮರುವಳ ಶಂಕರನಾರಾಯಣ ಭಟ್ಟರ ಪತ್ನಿ ವೆಂಕಟೇಶ್ವರಿ ಅಮ್ಮ (89) ಮಾ.25ರಂದು ನಿಧನರಾಗಿದ್ದರು. ಅಂದು ಬಂದ್‌ ಇದ್ದರೂ ಮನೆಮಂದಿ ಹೇಗೋ ಪುರೋಹಿತರನ್ನು ಕರೆಸಿ ಅಂತಿಮ ವಿಧಿವಿಧಾನ ನೆರವೇರಿಸಿದ್ದರು. ಆದರೆ ಮೂರನೇ ದಿನದ ಕಾರ್ಯಕ್ರಮಕ್ಕೆ ಪುರೋಹಿತರನ್ನು ಕರೆಸುವುದು ಸಾಧ್ಯವಾಗಲಿಲ್ಲ.

ಕೋವಿಡ್‌-19: ಚಿತ್ರದುರ್ಗ ಜಿಲ್ಲೆಯಲ್ಲಿ 12 ಫೀವರ್‌ ಆಸ್ಪತ್ರೆ ಆರಂಭ

ಕೊನೆಗೆ ಬದಿಯಡ್ಕ ಪಂಜರಿಕೆ ವೇ.ಮೂ.ಗಣಪತಿ ಭಟ್ಟರು ತನ್ನ ಮನೆಯಿಂದಲೇ ವೀಡಿಯೋ ಕಾಲ್‌ ಮೂಲಕ ಬೂದಿಮುಚ್ಚುವಿಕೆಯ ವಿಧಿವಿಧಾನವನ್ನು ಮಂತ್ರ ಮೂಲಕ ತಿಳಿಸಿದರು. ಅದರಂತೆ ಧಾರ್ಮಿಕ ಪ್ರಕ್ರಿಯೆಗಳನ್ನು ಮನೆಯವರು ನಡೆಸಿದರು.

ಸುಮಾರು ಒಂದೂವರೆ ಗಂಟೆ ಕಾಲ ವೀಡಿಯೋ ಕಾಲ್‌ ಮೂಲಕ ಈ ಪ್ರಕ್ರಿಯೆ ನಡೆಯಿತು ಎಂದು ದಿ.ವೆಂಕಟೇಶ್ವರಿ ಅಮ್ಮ ಅವರ ಪುತ್ರ ಡಾ.ಉದಯಶಂಕರ ಭಟ್‌ ತಿಳಿಸಿದ್ದಾರೆ. ಲಾಕ್‌ಡೌನ್‌ ಕಾರಣ ದ.ಕ. ಜಿಲ್ಲೆಯಲ್ಲಿರುವ ಇಬ್ಬರು ಪುತ್ರಿಯರಿಗೆ ತಾಯಿಯ ಅಂತಿಮ ದರ್ಶನಕ್ಕೂ ಬರಲು ಸಾಧ್ಯವಾಗಿರಲಿಲ್ಲ.