ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಧನ್ ಖಾತೆ ಹಣ ತೆಗೆಯಲು ನೂಕುನುಗ್ಗಲು!
ಕೇಂದ್ರ ಸರ್ಕಾರ ಜನಧನ್ ಯೋಜನೆಯಡಿ ಮಹಿಳಾ ಫಲಾನುಭವಿಗಳ ಖಾತೆಗೆ ತಲಾ 500 ವರ್ಗಾವಣೆ| ಹಣ ತೆಗೆಯಲು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತ ಜನರು| ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಹಣ ಪಡೆಯಲು ಸೇರಿದ ಜನತೆ|
ಹಾವೇರಿ(ಏ.08): ಜನಧನ್ ಯೋಜನೆ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಆಗಿರುವ 500 ರು. ತೆಗೆಯಲು ಜಿಲ್ಲೆಯ ಎಟಿಎಂಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿರುವ ದೃಶ್ಯ ಎಲ್ಲೆಡೆ ಕಂಡುಬಂದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜನಧನ್ ಯೋಜನೆಯಡಿ ಮಹಿಳಾ ಫಲಾನುಭವಿಗಳ ಖಾತೆಗೆ ತಲಾ 500 ವರ್ಗಾವಣೆ ಮಾಡಿದೆ. ಅಲ್ಲದೇ ಉಜ್ವಲ ಯೋಜನೆ ಫಲಾನುಭವಿಗಳ ಖಾತೆಗೂ ಗ್ಯಾಸ್ ಸಿಲಿಂಡರ್ ಕೊಳ್ಳಲು ಹಣ ಜಮಾ ಮಾಡಿದೆ. ಇದನ್ನು ಪಡೆಯಲು ಬ್ಯಾಂಕ್ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.
ಲಾಕ್‌ಡೌನ್ ಎಫೆಕ್ಟ್: ಟೆಕ್ಕಿಗಳಿಂದ ತರಕಾರಿ ಮಾರಾಟ!
ಪುರುಷರು, ಮಹಿಳೆಯರು ಬೆಳಗ್ಗೆಯಿಂದಲೇ ಪಾಳಿ ಹಚ್ಚಿ ಎಟಿಎಂ ಮುಂದೆ ನಿಂತಿದ್ದರು. ಕೆಲವು ಕಡೆಯಂತೂ ನೂಕುನುಗ್ಗಲಿನ ವಾತಾವರಣವೂ ಇತ್ತು. ಕೆಲವು ಎಟಿಎಂಗಳು, ಬ್ಯಾಂಕ್ ಎದುರು ಪೊಲೀಸರು ಪರಿಸ್ಥಿತಿ ಸುಧಾರಿಸುತ್ತಿದ್ದರೆ, ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಹಣ ಪಡೆಯಲು ಸೇರಿದ್ದರು.