Asianet Suvarna News Asianet Suvarna News

ಲಾಕ್‌ಡೌನ್‌: ಮಾಂಸ ಖರೀದಿಗೆ ಅವಕಾಶ, ಎದ್ನೋ ಬಿದ್ನೋ ಅಂತ ಓಡೋಡಿ ಬಂದ ಜನ!

ಸಾಮಾಜಿಕ ಅಂತರ ಪಾಲಿಸಿದ ಅವಳಿ ನಗರದ ಜನತೆ| ಆಟೋ ಚಾಲಕರು ಸೇರಿದಂತೆ ಕಾರ್ಮಿಕರಿಗೆ ಸುರಕ್ಷಾ ಕಿಟ್‌ ವಿತರಣೆ| ಹಲವು ದಿನಗಳ ನಂತರ ಶುಕ್ರವಾರ ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ|

People Buy Meat in Gadag During Bharath LockDown
Author
Bengaluru, First Published Apr 4, 2020, 9:21 AM IST

ಗದಗ(ಏ.04): ಲಾಕ್‌ಡೌನ್‌ 10ನೇ ದಿನವಾದ ಶುಕ್ರವಾರವೂ ಜಿಲ್ಲೆಯಾದ್ಯಂತ ಯಶಸ್ವಿಯಾಯಿತು. ಪ್ರತಿ ದಿನ ಬೆಳಗಿನ ತರಕಾರಿ ಖರೀದಿ ಸಂದರ್ಭದಲ್ಲಿ ಉಂಟಾಗುತ್ತಿದ್ದ ಜನಜಂಗುಳಿಗೆ ಶುಕ್ರವಾರ ಬ್ರೇಕ್‌ ಬಿದ್ದಿದ್ದು, ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. 

ಜಿಲ್ಲೆಯ ಗಜೇಂದ್ರಗಡ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಪಟ್ಟಣಗಳಲ್ಲಿಯೂ ಅಲ್ಪ ಸುಧಾರಣೆ ಕಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜನರ ಓಡಾಟ ಮಾತ್ರ ಎಂದಿನಂತೆ ಕಂಡು ಬಂತು. ಎಲ್ಲಾ ಜಿಲ್ಲಾ ಕೇಂದ್ರಗಳ ಗಡಿಯಲ್ಲಿ ಕಡ್ಡಾಯವಾಗಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸಿದ್ದರೂ ಜಿಲ್ಲೆಯ ಶಿರಹಟ್ಟಿತಾಲೂಕಿನ ತಾಂಡಾಗಳಿಗೆ ಗುರುವಾರ ರಾತ್ರಿಯೂ ಹಲವಾರು ಜನರು ಪಕ್ಕದ ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿದ್ದಾರೆ ಎನ್ನುವ ಚರ್ಚೆಗಳು ಶಿರಹಟ್ಟಿತಾಲೂಕಿನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಕೊರೋನಾ ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ ಸಚಿವ ಪಾಟೀಲ ಒಂದು ವರ್ಷದ ವೇತನ

ಪೌರಕಾರ್ಮಿಕರಿಗೆ ಸನ್ಮಾನ

ಗದಗ ಬೆಟಗೇರಿ ಅವಳಿ ನಗರದ ನೈರ್ಮಲ್ಯಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಗದಗ ಸರ್ವೋದಯ ಕಾಲೋನಿಯ ನಿವಾಸಿಗಳು ಮುಖಂಡ ಅವಿನಾಶ ಜೈನ್‌ ನೇತೃತ್ವದಲ್ಲಿ ಶುಕ್ರವಾರ ಮುತ್ತಿನ ಹಾರ ಹಾಕಿ ಸನ್ಮಾನಿಸಿದರು. ಪೌರ ಕಾರ್ಮಿಕರ ಶ್ರಮ ಮತ್ತು ಅವರ ತ್ಯಾಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅವರೊಟ್ಟಿಗೆ ಸೆಲ್ಫಿ ತೆಗೆದು ಗೌರವಿಸಿದರು.

ರಕ್ಷಣಾ ಕಿಟ್‌ ವಿತರಣೆ

ಕಾರ್ಮಿಕರ ಇಲಾಖೆ, ನಗರಸಭೆ, ರೆಡ್‌ ಕ್ರಾಸ್‌ ಸಂಸ್ಥೆ ವತಿಯಿಂದ ಶುಕ್ರವಾರ ಅವಳಿ ನಗರದ ಆಟೋ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ಕೊರೋನಾ ರಕ್ಷಣಾ ಕಿಟ್‌ ವಿತರಣೆ ಮಾಡಲಾಯಿತು. ನಗರದ ತೋಂಟದಾರ್ಯ ಮಠದ ಬಳಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ, ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್‌. ಜಿ. ಸಲಗರೆ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ರಕ್ಷಣಾ ಕಿಟ್‌ ವಿತರಣೆ ಮಾಡಿದರು.

ಲಾಕ್‌ಡೌನ್‌ ಹಿನ್ನೆಲೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಗದಗ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್‌. ಸಂಗ್ರೇಶಿ, ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗರೆ ನಗರದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಊಟವಿಲ್ಲದೇ ಪರದಾಡುತ್ತಿರೋ ಭಿಕ್ಷುಕರ ಸ್ಥಿತಿ ನೋಡಿ ಇಬ್ಬರು ವೃದ್ಧ ಭಿಕ್ಷುಕರನ್ನು ಸ್ವಾಧಾರ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು.

ಮಾಂಸ ಖರೀದಿಗೆ ಅವಕಾಶ

ಶುಕ್ರವಾರ ಮಾಂಸ ಖರೀದಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು. ಮಾಂಸ ಮಾರಾಟ ಶುರುವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಮಾಂಸ ಪ್ರಿಯರು ಅವಳಿ ನಗರದ ಜವಳಗಲ್ಲಿಯ ಮಾಂಸದ ಮಾರುಕಟ್ಟೆಗೆ ಧಾವಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿಸಿದ್ದು ಕಂಡು ಬಂತು.
 

Follow Us:
Download App:
  • android
  • ios